ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಗುರುವಾರವೂ ಮುಂದುವರೆದಿದ್ದು, ಮತ್ತೆ ಮೂವರು ಶಿವಸೇನೆ ಶಾಸಕರು ಹಾಗೂ ಹಲವು ಸಂಸದರು ಕೂಡ ಬಿಜೆಪಿ ಮತ್ತು ಏಕನಾಥ ಶಿಂಧೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.
ಶಿವಸೇನೆಯ 8-9 ಸಂಸದರು ಬಂಡಾಯವೆದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾದ್ದು, ಏಕನಾಥ್ ಶಿಂಧೆ ನೇತೃತ್ವದ ಗುಂಪಿನಲ್ಲಿ ಸುಮಾರು 40 ಶಾಸಕರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಈ ಬಿಕ್ಕಟ್ಟಿನ ಹಿನ್ನಲೆಯಲ್ಲಿ ನಿನ್ನೆ ಉದ್ಧವ್ ಠಾಕ್ರೆ ಅವರು ಸಿಎಂ ಅಧಿಕೃತ ನಿವಾಸ ತೊರೆದಿದ್ದಾರೆ.
ಸಭೆ ರದ್ದು.. ಶಿವಸೇನೆ ಮಹತ್ವದ ನಿರ್ಧಾರ:
ಇನ್ನು, ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರದ ಭವಿಷ್ಯ ಇನ್ನೂ ಅತಂತ್ರವಾಗಿಯೇ ಇದ್ದು, ಇಂದು ಶಿವಸೇನೆ ಶಾಸಕರ ಸಭೆ ನಡೆಯಬೇಕಿತ್ತು. ಆದರೆ, ಈ ಸಭೆಯನ್ನು ದಿಢೀರ್ ರದ್ದುಪಡಿಸಲಾಗಿದೆ.
ಹೌದು, ಉದ್ಧವ್ ಠಾಕ್ರೆ ಇಂದು ಯಾವುದೇ ಸಭೆ ನಡೆಸುವುದಿಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ. ಕೆಲವು ಶಾಸಕರು ಇಂದು ಮಾತೋಶ್ರೀಗೆ ಬರುವ ಸಾಧ್ಯತೆಯಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿ ದೊಡ್ಡ ಮಟ್ಟದ ಮಾಹಿತಿ ನೀಡಲಾಗುವುದು ಎಂದು ರಾವತ್ ಹೇಳಿದ್ದಾರೆ.