ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರಿಗೆ ಅನೇಕ ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಇದರಲ್ಲಿ ಸ್ಥಿರ (ಫಿಕ್ಸೆಡ್ ಡಿಪಾಜಿಟ್) ಠೇವಣಿಗಳೂ ಇದರ ಒಂದು ಭಾಗ. ಎಫ್‌ಡಿ ಯೋಜನೆಗಳಿಗೆ ಸೇರುವುದರಿಂದ ಬಡ್ಡಿ ಸಿಗುತ್ತದೆ. ಇದನ್ನು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ನಿಮ್ಮ ಠೇವಣಿ ಹಣದ ಜೊತೆಗೆ ಬಡ್ಡಿಯನ್ನು ಸೇರಿಸಿ ಮುಕ್ತಾಯದ ಸಮಯ (ಮೆಚ್ಯುರಿಟಿ) ದಲ್ಲಿ ತೆಗೆದುಕೊಳ್ಳಬಹುದು.
ಆದರೆ, ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆಯನ್ನು ನೀಡುತ್ತಿದ್ದು, ಇದರ ಹೆಸರು ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆ(annuity deposit scheme). ನೀವು ಈ ಯೋಜನೆಗೆ ಸೇರಿಕೊಂಡು ಹಣವನ್ನು ಠೇವಣಿ ಇರಿಸಿ ಖಾತೆ ತೆರೆದರೆ, ಪ್ರತಿ ತಿಂಗಳು ಹಣ ಬರುತ್ತದೆ. ಆದರೆ, ನಿಮಗೆ ಮುಕ್ತಾಯದ ಸಮಯ ( ಮೆಚ್ಯುರಿಟಿ) ದಲ್ಲಿ ಯಾವುದೇ ಹಣವನ್ನು ಬರುವುದಿಲ್ಲ.
ಇದರರ್ಥ ನೀವು ಎಸ್‌ಬಿಐ ವರ್ಷಾಶನ ಯೋಜನೆಗೆ (annuity deposit scheme) ಸೇರ್ಪಡೆಗೊಂಡರೆ, ನೀವು ಠೇವಣಿ ಇಟ್ಟ ಹಣದ ಒಂದು ಭಾಗವನ್ನು ಮತ್ತು ಪ್ರತಿ ತಿಂಗಳು ಅದರ ಮೇಲೆ ಬರುವ ಬಡ್ಡಿಯ ಮೊತ್ತವನ್ನು ಸೇರಿಸಿ ಬ್ಯಾಂಕ್ ನಿಮಗೆ ಹಣ ಪಾವತಿಸುತ್ತದೆ. ಇದರಿಂದ ನೀವು ಮುಕ್ತಾಯದ ಸಮಯಕ್ಕೆ ಯಾವುದೇ ಹಣವನ್ನು ಪಡೆಯುವುದಿಲ್ಲ. ಸಾಮಾನ್ಯ ಮತ್ತು ಸ್ಥಿರ ಠೇವಣಿಗಳ ನಡುವಿನ ವ್ಯತ್ಯಾಸ ಇದು.
ಈ ಯೋಜನೆಗೆ ಸೇರಲು ನೀವು ಕನಿಷ್ಠ 60,000 ರೂ. ಹಣವನ್ನು ಡಿಪಾಜಿಟ್ ಮಾಡಬೇಕು. ನಿಮಗೆ ತಿಂಗಳಿಗೆ ಕನಿಷ್ಠ 1,000 ರೂ. ಸಿಗುತ್ತದೆ. ನೀವು ಮೂರು ವರ್ಷ, ಐದು ವರ್ಷ, ಏಳು ವರ್ಷ ಮತ್ತು ಹತ್ತು ವರ್ಷಗಳ ಕಾಲಮಿತಿಯೊಂದಿಗೆ ಈ ಯೋಜನೆಗೆ ಸೇರಬೇಕಾಗುತ್ತದೆ. ಟರ್ಮ್ ಠೇವಣಿಗಳಿಗೆ ಅನ್ವಯವಾಗುವ ಅದೇ ಬಡ್ಡಿದರವು ಸಹ ಇಲ್ಲಿ ಅನ್ವಯಿಸುತ್ತದೆ.
ಉದಾಹರಣೆಗೆ ನೀವು ಎಸ್‌ಬಿಐ ಬ್ಯಾಂಕ್‌ಗೆ ಹೋಗಿ 3 ಲಕ್ಷ ರೂ. ಠೇವಣಿ ಇರಿಸಿ ಮತ್ತು ವರ್ಷಾಶನ ಯೋಜನೆಯಡಿ (annuity deposit scheme) ಖಾತೆ ತೆರೆದಿದ್ದೀರಿ. ಮೂರು ವರ್ಷಗಳ ಕಾಲಮಿತಿ ಆಯ್ಕೆಯನ್ನು ಆಯ್ಕೆ ಮಾಡಿದ್ದೀರಿ. ಈಗ ನಿಮಗೆ ತಿಂಗಳಿಗೆ 9,000 ರೂ. ಸಿಗುತ್ತದೆ. ಇಲ್ಲಿ ಬಡ್ಡಿದರವನ್ನು ಶೇಕಡಾ 5.3 ಎಂದು ಪರಿಗಣಿಸಲಾಗಿದೆ. ಮುಕ್ತಾಯದ (ಮೆಚ್ಯುರಿಟಿ) ಸಮಯದಲ್ಲಿ ನೀವು ಯಾವುದೇ ಹಣವನ್ನು ಪಡೆಯುವುದಿಲ್ಲ. ನೀವು ಎಸ್‌ಬಿಐ ನೆಟ್ ಬ್ಯಾಂಕಿಂಗ್ ಮೂಲಕವೂ ಯೋಜನೆಗೆ ಸೇರಬಹುದು.