ಅಂಕೋಲಾ: ಜಲಪಾತದ ನೀರಿನಲ್ಲಿ ಈಜುತ್ತಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವಿಭೂತಿ ಫಾಲ್ಸ್ ಬಳಿ ನಡೆದಿದೆ. ರಕ್ಷಣೆಗೊಳಗಾದ ಪ್ರವಾಸಿಗನನ್ನು ಯಶವಂತ ದುವ್ವಾರಿ(26) ಎಂದು ಗುರುತಿಸಲಾಗಿದೆ.
ಹೈದರಾಬಾದ್ ಮೂಲದ ಪ್ರವಾಸಿಗ ಯಶವಂತ 12 ಮಂದಿ ಸ್ನೇಹಿತರೊಂದಿಗೆ ವಿಭೂತಿ ಫಾಲ್ಸ್‌ಗೆ ಪ್ರವಾಸಕ್ಕೆಂದು ಬಂದಿದ್ದ. ಫಾಲ್ಸ್ ಎದುರಿನ ನೀರಿನಲ್ಲಿ ಸ್ನೇಹಿತರೊಂದಿಗೆ ಈಜುತ್ತಿದ್ದ ವೇಳೆ ಮುಳುಗುವ ಹಂತದಲ್ಲಿದ್ದು, ಪ್ರವಾಸಿಗನನ್ನು ಗಮನಿಸಿದ ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿ ವಿಜಯ ನಾಯಕ ಕೂಡಲೇ ನೀರಿಗಿಳಿದು ಮುಳುಗುತ್ತಿದ್ದ ಪ್ರವಾಸಿಗ ಯಶವಂತನನ್ನು ರಕ್ಷಣೆ ಮಾಡಿದ್ದಾರೆ.
ಜಲಪಾತ ವೀಕ್ಷಣೆಗೆಂದು ಬರುವ ಪ್ರವಾಸಿಗರು ನೀರಿನ ಆಳ ತಿಳಿಯದೇ ಮೋಜು ಮಸ್ತಿಯ ಭರದಲ್ಲಿ ನೀರಿಗಿಳಿದು ಅಪಾಯ ತಂದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಜೀವ ರಕ್ಷಕ ಸಿಬ್ಬಂದಿ ಎಷ್ಟೋ ಬಾರಿ ಎಚ್ಚರಿಕೆ ನೀಡಿದರೂ ಸಹ ಸೂಚನೆ ಪಾಲನೆ ಮಾಡದೇ ಅವಘಡಕ್ಕೆ ಕಾರಣವಾಗುತ್ತಿದ್ದು ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.