ಬೆಂಗಳೂರು : ಇಂದು ಪ್ರಧಾನಿ ನರೇಂದ್ರ ಮೋದಿಯವರು ಕರೋನ ಲಸಿಕೆ ಹಂಚಿಕೆಗೆ ವರ್ಚ್ಯುವಲ್ ವೇದಿಕೆ ಮೂಲಕ ಚಾಲನೆ ನೀಡುತ್ತಿದ್ದಂತೆ, ಇತ್ತ ರಾಜ್ಯದ ಕೂಡ 243 ಕಡೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕರೋನ ಲಸಿಕೆಯ ಡೋಸ್ ಗಳು ತಲುಪಿದ್ದು, ಕರೋನ ಸೋಂಕಿನ ವಿರುದ್ಧ ಲಸಿಕೆ ಮಹಾಸಮರಕ್ಕೆ ಕರುನಾಡು ಸಜ್ಜಾಗಿದೆ.
ರಾಜ್ಯದಲ್ಲಿ ಕರೋನ ಸೋಂಕು ರಣಕೇಕೆ ಹಾಕಿತ್ತು. ಈ ಹೆಮ್ಮಾರಿಯ ಅಟ್ಟಹಾಸಕ್ಕೆ ಇಡೀ ರಾಜ್ಯವೇ ಸ್ತಬ್ದವಾಗಿತ್ತು. ಆದರೆ ಈಗ ಕರೋನ ಮಹಾಮಾರಿ ಒಡೆದೋಡಿಸೋ ಬಂದಿದ್ದು, ಬೆಂಗಳೂರಿನ 8 ಕಡೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳು ಸೇರಿದಂತೆ 243 ಕಡೆ ಕರೋನ ಲಸಿಕೆ ನೀಡಲಾಗುತ್ತದೆ. ಇದರಲ್ಲಿ 237 ಕಡೆ ಕೋವಿಶಿಲ್ಡ್ ಮತ್ತು 6 ಕಡೆ ಕಾವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತದೆ.
ಬಳ್ಳಾರಿ 21160 ಹಾಗು ದಾವಣಗೆರೆ 21810 ಸೇರಿದಂತೆ ರಾಜ್ಯದಲ್ಲಿ 647500 ಡೋಸ್ ವಿತರಣೆ:
ರಾಜ್ಯದಲ್ಲಿ ಬಳ್ಳಾರಿ 21160 ಹಾಗು ದಾವಣಗೆರೆ 21810 ಸೇರಿದಂತೆ ರಾಜ್ಯದ ಎಲ್ಲಾ ಕಡೆ ಒಟ್ಟು 647500 ಡೋಸ್ ಗಳನ್ನು ವಿತರಣೆ ಮಾಡಲಾಗಿದ್ದು, ರಾಜ್ಯದಲ್ಲಿ ಒಟ್ಟು 7 ಲಕ್ಷದ 17 ಸಾವಿರದ 439 ಅರೋಗ್ಯ ಸಿಬ್ಬಂದಿಗೆ ಕರೋನ ಲಸಿಕೆ ನೀಡಲಾಗುತ್ತದೆ. ಇನ್ನು ಇಂದು ಒಂದೇ ದಿನ ರಾಜ್ಯದಲ್ಲಿ 24 ಸಾವಿರದ 300 ಕರೋನ ವಾರಿಯರ್ಸ್ ಗೆ ಕರೋನ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಅರೋಗ್ಯ ಸಚಿವ ಕೆ ಸುಧಾಕರ್ ಅವರು ತಿಳಿಸಿದ್ದಾರೆ.