ಮುಂಬೈ : ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುತ್ತಿಕ್ಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಮುಂಬೈ ನ್ಯಾಯಾಲಯ ದೋಷ ಮುಕ್ತಗೊಳಿಸಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ನ್ಯಾಯಾಲಯ ಶಿಲ್ಪಾ ಶೆಟ್ಟಿ ಸಂತ್ರಸ್ತೆ ಎಂದು ಕೋರ್ಟ್ ತೀರ್ಪು ನೀಡಿದೆ.
2007ರಲ್ಲಿ ರಾಜಸ್ಥಾನದಲ್ಲಿ ಆಯೋಜನೆಗೊಂಡಿದ್ದ ಸಾರ್ವಜನಿಕ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ನಟಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದು, ಈ ವೇಳೆ ಹಾಲಿವುಡ್ ನಟ ರಿಚರ್ಡ್ ಗಿಯರ್ ಸಾರ್ವಜನಿಕವಾಗಿ ನಟಿ ಶಿಲ್ಪಾ ಶೆಟ್ಟಿ ಕೆನ್ನೆಗೆ ಮುತ್ತಿಕ್ಕಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.
ಇದರ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಹಾಗೂ ನಟ ರಿಚರ್ಡ್ ವಿರುದ್ಧ ರಾಜಸ್ಥಾನದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಾಗಿ,2017ರಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಜಸ್ಥಾನದ ಮ್ಯಾಜಿಸ್ಟ್ರೇಟ್ನ ಪ್ರಥಮ ದರ್ಜೆ ನ್ಯಾಯಾಲಯ ಈ ಪ್ರಕರಣವನ್ನ ಮುಂಬೈಗೆ ವರ್ಗಾವಣೆ ಮಾಡಿತ್ತು.
ಜನವರಿ 18ರಂದು ಇದರ ವಿಚಾರಣೆ ನಡೆಸಿರುವ ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತ್ಕಿ ಚವ್ಹಾಣ್, ಶಿಲ್ಪಾ ಶೆಟ್ಟಿ ವಿರುದ್ಧ ದಾಖಲಾಗಿರುವ ಪ್ರಕರಣ ಆಧಾರ ರಹಿತವಾಗಿದ್ದು, ರಿಚರ್ಡ್ ಗಿಯರ್ ಕೃತ್ಯಕ್ಕೆ ನಟಿ ಶಿಲ್ಪಾ ಶೆಟ್ಟಿ ಬಲಿಪಶುವಾಗಿದ್ದಾರೆ ಎಂದು ತೀರ್ಪು ನೀಡಿದ್ದಾರೆ.