ನವದೆಹಲಿ: ಮಾದಕ ದ್ರವ್ಯ ವಿರೋಧಿ ಸಂಸ್ಥೆಗಳ ಸಂಯುಕ್ತ ಕಾರ್ಯಾಚರಣೆ ಫಲವಾಗಿ ಶುಕ್ರವಾರ ಗುಜರಾತ್ ಕರಾವಳಿಯ ಭಾರತೀಯ ಸಮುದ್ರ ಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 700 ಕೆಜಿ ಮಾದಕ ದ್ರವ್ಯ ಪತ್ತೆಯಾಗಿದ್ದು, ಈ ಸಂಬಂಧ 8 ಇರಾನಿಯನ್ ಪ್ರಜೆಗಳನ್ನು ಬಂಧಿಸಲಾಗಿದೆ.
ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಹೊರಡಿಸಿದ ಹೇಳಿಕೆಯಲ್ಲಿ ಆಂತರಿಕ ಭದ್ರತೆಯ ಮಾಹಿತಿಯ ಆಧಾರದ ಮೇಲೆ ‘ಸಾಗರ ಮಂಥನ್ – 4’ ಎಂಬ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಅದರಂತೆ ನೌಕಾಪಡೆ ತನ್ನ ಸಮುದ್ರಗಾಮಿ ಪೆಟ್ರೋಲಿಂಗ್ ಸಹಾಯದಿಂದ ಒಂದು ನೌಕೆಯನ್ನು ಗುರುತಿಸಿ ತಡೆಗಟ್ಟಿತ್ತು.
ಈ ಕಾರ್ಯಾಚರಣೆಯಲ್ಲಿ ಸುಮಾರು 700 ಕೆಜಿ ಮೆಥಾಮ್ಫೆಟಮೈನ್ ಮಾದಕ ದ್ರವ್ಯವನ್ನು ಭಾರತೀಯ ಪ್ರಾದೇಶಿಕ ನೀರಿನಲ್ಲಿ ಪತ್ತೆಹಚ್ಚಲಾಯಿತು. ಈ ಸಂದರ್ಭದಲ್ಲಿ ಇರಾನಿಯನ್ ಪ್ರಜೆಗಳು ಎಂದು ಗುರುತಿಸಿಕೊಂಡ 8 ವಿದೇಶೀಯರನ್ನು ಬಂಧಿಸಲಾಯಿತು ಎಂದು NCB ತಿಳಿಸಿದೆ.
ಈ ಕಾರ್ಯಾಚರಣೆಯನ್ನು NCB, ನೌಕಾಪಡೆ ಮತ್ತು ಗುಜರಾತ್ ಪೊಲೀಸರ ಉಗ್ರವಿರೋಧಿ ದಳ (ATS) ಸಂಯುಕ್ತವಾಗಿ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾರ್ಯಾಚರಣೆಯನ್ನು ಸರ್ಕಾರದ ದೃಷ್ಟಿಕೋನ ಮತ್ತು ನಮ್ಮ ಸಂಸ್ಥೆಗಳ ಸಮನ್ವಯತೆಯ ಉದಾಹರಣೆ ಎಂದು ಶ್ಲಾಘಿಸಿದ್ದಾರೆ.