ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಸ್ಪಂದಿಸಲೆಂದು ಕೇಂದ್ರ ಸರ್ಕಾರ ಪಿಎಂ-ಕಿಸಾನ್ ಯೋಜನೆ ಜಾರಿ ಮಾಡಿದೆ. ಆದರೆ ಈ ಯೋಜನೆಯಡಿ 3.97 ಲಕ್ಷ ಅನರ್ಹರು ಹೆಸರು ನೋಂದಾಯಿಸಿ ಹಣ ಪಡೆದು ವಂಚಿಸಿರುವುದು ಪತ್ತೆಯಾಗಿದ್ದು, ಒಟ್ಟು ₹442 ಕೋಟಿ ಅನರ್ಹರಿಗೆ ಪಾವತಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೃಷಿ ಆಯುಕ್ತ ಬಿ. ಶರತ್, ಅನರ್ಹ ರೈತರಿಂದ ಹಣವನ್ನು ಹಿಂದಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳಲು ಈಗಾಗ್ಲೇ ಬ್ಯಾಂಕುಗಳಿಗೆ ಪತ್ರ ಬರೆಯಲಾಗಿದೆ. ಹಣ ಪಡೆಯಲು ಬ್ಯಾಂಕುಗಳಿಗೆ ನೆರವಾಗಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು, ಸ್ವಯಂ ನೋಂದಣಿಗೆ ಅವಕಾಶ ನೀಡಿದ್ದರಿಂದ 3,312 ಮೃತ ರೈತರ ಖಾತೆಗೂ ಹಣ ಪಾವತಿಯಾಗಿದೆ. ಹಣ ಹಿಂದಕ್ಕೆ ಪಡೆಯಲು ಅಧಿಕಾರಿಗಳು ಬ್ಯಾಂಕುಗಳಿಗೆ ಪತ್ರ ಬರೆದಿದ್ದಾರೆ. ಆದಾಯ ತೆರಿಗೆ ಪಾವತಿದಾರರು, ತಿಂಗಳಿಗೆ 10 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯುವವರು, ವೈದ್ಯರು, ಇಂಜಿನಿಯರ್, ವಕೀಲರು, ಸಿಎ, ಸರ್ಕಾರಿ ನೌಕರರು ಯೋಜನೆಗೆ ಅನರ್ಹರು.
ಕೇಂದ್ರ ಸರ್ಕಾರ 2019ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಜಾರಿ ಮಾಡಿತು. ಕೇಂದ್ರ ಒಬ್ಬ ರೈತರಿಗೆ ₹6,000 ನೀಡುವ ಜತೆಗೆ ರಾಜ್ಯ ಬಿಜೆಪಿ ಸರ್ಕಾರ ಈ ಯೋಜನೆಗೆ ಇನ್ನೂ ₹4,000 ಸೇರಿಸಿ ಒಟ್ಟು ₹10 ಸಾವಿರವನ್ನು ಪಾವತಿ ಮಾಡುತ್ತಿದೆ.