ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತದೆ ಎಂದು ತುಂಬಾ ವರ್ಷಗಳಿಂದ ಹೇಳಲಾಗುತ್ತಿದ್ದು ಈಗ ಅಂತಿಮವಾಗಿ 360 ಎಕರೆ ಭೂಮಿಯಲ್ಲಿ ಎಟಿಆರ್ 72 ಮಾದರಿಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಗುರುತಿಸಲಾಗಿದೆ.
ಇನ್ನು, ಭೂಮಿ ಗುರುತಿಸಿದ ಕೆಲವು ಸ್ಥಳಗಳ ಪೈಕಿ ಒಂದಾದ ಆನಗೋಡು ಹೋಬಳಿಯ ಹಾಲುವರ್ತಿ ಗ್ರಾಮದ ಸುತ್ತಮುತ್ತ ಅಧಿಕಾರಿಗಳು ಬಂದು ಹೋದ ಬಳಿಕ ಜನರು ನಿದ್ರೆ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಅಧ್ಯಕ್ಷ ಕೆ. ಎಲ್. ಹರೀಶ್ ಬಸಾಪುರ ಅವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾಣ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯಕತೆ ಇದ್ದರೂ ಬಡ ರೈತರ ಜೀವನದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಹೇಳಿದ್ದು, ಜಿಲ್ಲೆಯಲ್ಲಿ ಹಲವಾರು ಕಡೆ ಬಂಜರು ಭೂಮಿಯಿದ್ದು, ಅಲ್ಲಿಯ ಭೂಮಿಗಳನ್ನು ಗುರುತಿಸಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿ ಅಲ್ಲಿಯ ಯುವಕರಿಗೆ ಉದ್ಯೋಗ ನೀಡಿದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ,ರೈತರ ಪರವಾದ ಸರ್ಕಾರ, ರೈತರ ಪರವಾದ ಪಕ್ಷ ಎಂದು ಕೇವಲ ಘೋಷಣೆಯೊಂದಿಗೆ ಮಾತ್ರ ಇರದೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದರೆ ರೈತರಿಗೂ ಒಳ್ಳೆಯದು ದೇಶಕ್ಕೂ ಒಳ್ಳೆಯದು ಎಂದು ಜಿಲ್ಲಾ ಅಧ್ಯಕ್ಷ ಕೆ. ಎಲ್. ಹರೀಶ್ ಬಸಾಪುರ ಅವರು ಹೇಳಿದ್ದಾರೆ.




