ಬೆಂಗಳೂರು: ಚರ್ಮಗಂಟು ರೋಗದಿಂದ ಸಾವನ್ನಪ್ಪುವ ಜಾನುವಾರುಗಳಿಗೆ ಪರಿಹಾರವಾಗಿ ಹಸುವಿಗೆ ₹20 ಸಾವಿರ, ಎತ್ತುಗಳಿಗೆ ₹30 ಸಾವಿರ ಹಾಗೂ ಪ್ರತಿ ಕರುವಿಗೆ ₹5 ಸಾವಿರ ನೀಡಲಾಗುವುದು’ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್, ‘ಚರ್ಮಗಂಟು ರೋಗದಿಂದ ಜಾನುವಾರುಗಳ ಸಾವು ಪ್ರಕರಣದಲ್ಲಿ ಮಾಲೀಕರಿಗೆ ಪರಿಹಾರ ನೀಡಲು ₹2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಈ ರೋಗವನ್ನು ಹತೋಟಿಗೆ ತರಲಾಗುತ್ತಿದೆ’ ಎಂದಿದ್ದಾರೆ.
ಚರ್ಮಗಂಟು ರೋಗ: ಪರಿಹಾರ ಧನ ಹೀಗೆ ಪಡೆಯಿರಿ
ಜಾನುವಾರುಗಳು ಚರ್ಮಗಂಟು ರೋಗದಿಂದ ಸಾವನಪ್ಪಿದ್ದರೆ ಪರಿಹಾರ ಧನವನ್ನು ಜಾನುವಾರು ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲ್ಪಟ್ಟಿರುವ ಬ್ಯಾಂಕ್ ಖಾತೆಗೆ RTGS/NEFT ಮುಖಾಂತರ ನೇರವಾಗಿ ಪಾವತಿಸಲಾಗುತ್ತದೆ.
ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುವಿನ ಸೂಕ್ತ ಛಾಯಚಿತ್ರಗಳು & ಯುಐಡಿ ಇಯರ್ ಟ್ಯಾಗ್ ಇರಬೇಕು. ಆದರೆ ಮಾಲೀಕರಿಗೆ ಫೋಟೋ ಒದಗಿಸುವಂತೆ ಒತ್ತಾಯಿಸುವಂತಿಲ್ಲ ಮತ್ತು ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರು ವಿಮಾ ಸೌಲಭ್ಯ ಹೊಂದಿದಲ್ಲಿ ಮರಣ ಪರಿಹಾರ ಧನವನ್ನು ಪಾವತಿಸಲಾಗುವುದಿಲ್ಲ.