ವಿಜಯಪುರ: ನಿಮ್ಮನ್ನು ಗ್ಯಾರಂಟಿ ಕೇಳಿದ್ದು ಯಾರು? ಡಿ.ದೇವರಾಜು ಅರಸು ಅಕ್ಕಿ ಕೊಡಲಿಲ್ಲ, ಅಕ್ಕಿ ಬೆಳೆಯುವ ಭೂಮಿ ಕೊಟ್ಟರು. ಸಿದ್ದರಾಮಯ್ಯನವರ ಈ ಗ್ಯಾರಂಟಿ ಯೋಜನೆ ನಿರ್ಣಯ ಒಳ್ಳೆಯದಲ್ಲ. ಒಂದು ಬಿಯರ್ ₹13೦ ಇದ್ದದ್ದು ₹27೦ ಆಗಿದೆ. ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ ₹2೦೦೦ ಕೊಟ್ಟರೆ ಏನು ಪ್ರಯೋಜನ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದರು. ರಾತ್ರಿ ೧೧.೩೦ರವರೆಗೂ ಸಿದ್ದರಾಮಯ್ಯನವರಿಗೆ ಕಾದು ನಾನು ಗ್ಯಾರಂಟಿ ಯೋಜನೆಯಿಂದ ಆಗುವ ಸಮಸ್ಯೆಗಳನ್ನು ವಿವರಿಸಿದ್ದೆ. ಒಂದು ಸಂಸಾರಕ್ಕೆ ಏನು ಸಮಸ್ಯೆ ಇದೆ ಅದನ್ನು ಮೊದಲು ಬಗೆಹರಿಸಿ. ಗ್ಯಾರಂಟಿ ಬದಲು ಉಚಿತ ಆರೋಗ್ಯ ಚಿಕಿತ್ಸೆ ಕೊಡಬಹುದಿತ್ತು. ಇಂದು ಆಸ್ಪತ್ರೆಗೆ ಹೋದರೆ ಲಕ್ಷಾಂತರ ರೂಪಾಯಿ ಬಿಲ್ ಆಗುತ್ತದೆ. ಗ್ಯಾರಂಟಿ ಬದಲು ಇದನ್ನು ತಪ್ಪಿಸಬೇಕಿತ್ತು. ಆದರೆ, ಸಿದ್ದರಾಮಯ್ಯನವರು ತಮಗೆ ತೋಚಿದ್ದನ್ನು ಮಾಡಿದ್ದಾರೆ. ಅದು ಜನರಿಗೆ ಬೇಕಾ ಬೇಡವಾ ಎಂಬುದನ್ನು ತಿಳಿದುಕೊಳ್ಳಬೇಕಿತ್ತು ಎಂದರು.
ರಾಜ್ಯೋತ್ಸವ ಬರೀ ಡಂಗೂರ ಇರತ್ತೆ. ಆದರೆ ಕೃತಿಯಲ್ಲಿ ಯಾವುದೂ ಆಗಲ್ಲ. ಸಿಎಂ ಸಿದ್ದರಾಮಯ್ಯ ಕನ್ನಡದ ಭಾಷೆ ಹಾಗೂ ಶಿಕ್ಷಣದ ಬಗ್ಗೆ ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಗಡಿ ಭಾಗದಲ್ಲಿ ಶಿಕ್ಷಕರಿಲ್ಲ:
ವಿಧಾನಸೌಧದ ಮುಂದೆ ₹27 ಕೋಟಿ ಖರ್ಚು ಮಾಡಿ ಕನ್ನಡಾಂಬೆಯ ಕಂಚಿನ ಪ್ರತಿಮೆ ಹಾಕುತ್ತಾರೆ. ಗಡಿನಾಡು ಭಾಗದಲ್ಲಿ ಕನ್ನಡ ಶಿಕ್ಷಕರೇ ಇಲ್ಲ. ₹10 ಸಾವಿರ ಕೊಟ್ಟು ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಕನ್ನಡದ ಆಡಳಿತ ಭಾಷೆ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಿ ರಾಷ್ಟ್ರಾಧ್ಯಕ್ಷರಿಗೆ ಕಳಿಸಿದರು. ಆದರೆ, ಅವರು ಸ್ಪಷ್ಟೀಕರಣ ಕೇಳಿದರು. ಈ ವಿಚಾರವಾಗಿ ಏನಾಯಿತು ಎಂದು ತಿಳಿಸಲಿಲ್ಲ ಎಂದ ಅವರು, ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಯಲ್ಲಿ ಕನ್ನಡ ಕಡ್ಡಾಯ ಮಾಡಬೇಕು ಎಂದರು.ರಾಜ್ಯದಲ್ಲಿ ಉಪ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಉಪ ಚುನಾವಣೆ ಎಂದರೆ ಮಾಧ್ಯಮದವರು, ರಾಜಕಾರಣಿಗಳು ಅದಕ್ಕೆ ಬೇರೆ ಬೇರೆ ಬಣ್ಣ ಕೊಡುತ್ತಾರೆ. ಉಪ ಚುನಾವಣೆಯಲ್ಲಿ 135 ಆಗಲ್ಲ, 137 ಆಗಲ್ಲ ಎಂದರು.