ವಿಜಯಪುರ: ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕುವುದು ಸಾಮಾನ್ಯ. ಆದರೆ, ಖಾಸಗಿ ಬಸ್ ಚಾಲಕನೊಬ್ಬ ಹೆಲ್ಮೆಟ್ ಹಾಕಿಕೊಂಡು ಬಸ್ ಚಾಲನೆ ಮಾಡುವ ಮೂಲಕ ಪ್ರಯಾಣಿಕ ಜೀವದ ಜತೆಗೆ ಚೆಲ್ಲಾಟ ಆಡಲು ಮುಂದಾದ ಪ್ರಸಂಗ ನಡೆದಿದೆ.
ವಿಜಯಪುರದಿಂದ ಬೆಂಗಳೂರಿಗೆ ಪ್ರತಿದಿನ ರಾತ್ರಿ 10ಗಂಟೆಗೆ ಪ್ರಯಾಣ ಬೆಳೆಸುವ ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರ ನಿರ್ಲಕ್ಷದಿಂದ ಅವಘಡ ಸಂಭವಿಸಿದ್ದು, ಪ್ರಯಾಣಿಕ ಮುನ್ನೆಚ್ಚರಿಕೆಯಿಂದ ಆಗಬಹುದಾದ ಅನಾಹುತ ತಪ್ಪಿದೆ.
ಘಟನೆ ವಿವರ:
ಅ.12ರ (ಶನಿವಾರ) ರಾತ್ರಿ ಖಾಸಗಿ ಬಸ್ ಚಾಲಕ ಏಕಾಏಕಿ ಹೆಲ್ಮೆಟ್ ಹಾಕಿ ಬಸ್ ಚಾಲನೆ ಮಾಡಲು ಮುಂದಾಗಿದ್ದ. ಇದರಿಂದ ಕಕ್ಕಾಬಿಕ್ಕಿಯಾಗಿ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಈ ವೇಳೆ ಅಸಲಿ ವಿಷಯ ಬಾಯಿಬಿಟ್ಟ ಚಾಲಕ, ಬಸ್ಸಿನ ಮುಂಭಾಗದ ಗ್ಲಾಸ್ ಒಡೆದಿರುವುದಾಗಿ ತಿಳಿಸಿದ್ದಾನೆ. ಆಗ ಸಿಟ್ಟಿಗೆದ್ದ ಎಲ್ಲ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದು, “ನಮ್ಮ ಜೀವದ ಜತೆಗೆ ಚೆಲ್ಲಾಟ ಆಡಬೇಡಿ, ಬೇರೆ ಬಸ್ ವ್ಯವಸ್ಥೆ ಮಾಡಿಕೊಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಮಧ್ಯಪ್ರವೇಶ:
ಬದಲಿ ಬಸ್ ವ್ಯವಸ್ಥೆ ಮಾಡುವಂತೆ ಮಾಡಿದ ಪ್ರಯಾಣಿಕರ ಮನವಿಗೆ ಒಪ್ಪದ ಬಸ್ ಮಾಲೀಕರು, ಬೇರೆ ಬಸ್ ಕಳುಹಿಸುವುದಿಲ್ಲ. ಬೇಕಾದರೆ ನಿಮ್ಮ ಹಣ ಮರಳಿಸುತ್ತೇವೆ ಎಂದು ದುರಹಂಕಾರ ಮೆರೆದಿದ್ದಾರೆ. ಆಗ ಪ್ರಯಾಣಿಕರು ಮತ್ತು ಖಾಸಗಿ ಬಸ್ ಮಾಲೀಕರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು. ಬಳಿಕ, ಪೊಲೀಸರ ಸೂಚನೆ ಮೇರೆಗೆ ಬಸ್ ಮಾಲೀಕರು ಸಿಂದಗಿಯಿಂದ ಮತ್ತೊಂದು ಬಸ್ ತರಿಸಿ ಬೆಂಗಳೂರಿಗೆ ಕಳುಹಿಸಿದ್ದಾರೆ. ಇದರಿಂದಾಗಿ 4 ಗಂಟೆಗಳ ಕಾಲ ಪ್ರಯಾಣ ವಿಳಂಬವಾಗಿದ್ದು, ಪ್ರಯಾಣಿಕರು ಬಸ್ ಏಜೆನ್ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರೀತಿ ದುರ್ವರ್ತನೆ ತೋರಿದ ಸುಗಮ ಬಸ್ ಏಜೆನ್ಸಿ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಇನ್ನೊಮ್ಮೆ ಹೀಗೆ ಆಗದಂತೆ ಎಚ್ಚರಿಕೆ ನೀಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.