3 ಕೋಟಿ ಜನಸಂಖ್ಯೆ ಇರುವ ವೀರಶೈವ-ಲಿಂಗಾಯತ ಸಮುದಾಯಕ್ಕೆ ಕೇಂದ್ರ ಸಚಿವ ಸ್ಥಾನವಿಲ್ಲ: ಶಂಕರ ಬಿದರಿ
ಹೊಸದುರ್ಗ: ವೀರಶೈವ-ಲಿಂಗಾಯತ ಎನ್ನುವುದು ಬೇರೆ ಬೇರೆಯಲ್ಲ ಈ ಹಿಂದಿನಿಂದಲೂ ಮುಂದೆಂದಿಗೂ ಎರಡೂ ಒಂದೇ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದ್ದಾರೆ.
ನಗರದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ವೀರಶೈವ-ಲಿಂಗಾಯಿತ ಸಮಾಜದಲ್ಲಿ ಕೇವಲ ಬಣಜಿಗ, ನೊಳಂಬ, ಕುಂಚಿಟಗ, ಸಾದರು ಮಾತ್ರವಿಲ್ಲ. ಲಿಂಗಾಯಿತರಲ್ಲಿ ಕಮ್ಮಾರ, ಚಮ್ಮಾರ, ಶಿವಸಿಂಪಿ, ಕುರುಬ ಹೀಗೆ ನೂರಾರು ಒಳ ಪಂಗಡಗಳು ಇವೆ. ನಾವೆಲ್ಲಾ ಒಗ್ಗಟ್ಟಾಗಿ ಸಂಗಟಿತರಾಗಬೇಕಿದೆ. ರಾಜ್ಯದಲ್ಲಿನ 7 ಕೋಟಿ ಜನಸಂಖ್ಯೆಯಲ್ಲಿ 3 ಕೋಟಿ ವೀರಶೈವ-ಲಿಂಗಾಯಿತರಿದ್ದರು. ದೇಶದ ಸಂಸತ್‌ನಲ್ಲಿ ಕ್ಯಾಬಿನೆಟ್ ಸ್ಥಾನಮಾನದ ಸಚಿವರು ಯಾರು ಇಲ್ಲ ಎಂಬುದೇ ಬೇಸರದ ಸಂಗತಿ ಎಂದರು.
ವೀರಶೈವ ಬೇರೆ, ಲಿಂಗಾಯಿತ ಬೇರೆ ಎಂದು ಗೊಂದಲ ಸೃಷ್ಠಿಸುವುದು ಬೇಡ. ವೀರಶೈವ ಧರ್ಮಕ್ಕೆ 36 ಲಕ್ಷ ವರ್ಷಗಳ ಇತಿಹಾಸವಿದೆ ಎಂದು ಕಾಶಿ ಜಗದ್ಗುರುಗಳು ರಚಿಸಿರುವ ತಂತ್ರಜಾಲದಲ್ಲಿ ಹೇಳಲಾಗಿದೆ. ಇದಕ್ಕೆಲ್ಲಾ ಸಾಕ್ಷಿ ಕೊಡಲು ಸಾಧ್ಯವಿಲ್ಲ ಏಕೆಂದರೆ ಶ್ರೀ ರಾಮ ಅಯೋಧ್ಯಯಲ್ಲಿಯೇ ಹುಟ್ಟಿದ್ದ ಎನ್ನುವುದಕ್ಕೆ ಸಾಕ್ಷಿ ಕೊಡಲು ಸಾಧ್ಯವೇ? ಇವೆಲ್ಲಾ ನಂಬಿಕೆ ಅಷ್ಠೆ. ಆದ್ದರಿಂದ, ಲಿಂಗಾಯಿತ ಧರ್ಮವನ್ನು ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ್ದರು ಎಂದು ಹೇಳಲಾಗುತ್ತಿದೆ ಆದರೆ, ವೀರಶೈವ ಹಾಗೂ ಲಿಂಗಾಯಿತ ಧರ್ಮಗಳ ಸಾರ ಒಂದೇ ಆಗಿರುವುದರಿಂದ ಬಾಳೆಹೊನ್ನೂರಿನ ಜಗದ್ದುರುಗಳು ಹಾಗೂ ಸಿದ್ದಗಂಗೆಯ ಶಿವಕುಮಾರ ಶ್ರೀಗಳು ಹೇಳಿರುವಂತೆ ವೀರಶೈವ – ಲಿಂಗಾಯಿತ ಒಂದೇ ಎಂದು ಎಲ್ಲರೂ ಭಾವಿಸೋಣ ಎಂದರು.
120 ವರ್ಷಗಳಲ್ಲಿ ವೀರಶೈವ ಮಹಾಸಭಾ ಕೇವಲ ಸಮುದಾಯಕ್ಕೆ ಪರಿಚಯವಾಗುವುದಕ್ಕೆಸೀಮಿತವಾಗಿದೆ. ಸ್ಥಾಪನೆಯಾದಾಗ ಮಹಾಸಭೆ ಹೊಂದಿದ್ದ ಮೂಲ ಆಶಯ ವಿದ್ಯಾರ್ಥಿ ನಿಲಯ ಸ್ಥಾಪನೆ ಇನ್ನೂ ಮರೀಚಿಕೆ. ಈ ತಪ್ಪು ಒಬ್ಬರಿಂದ ಆಗಿಲ್ಲ ಇಡೀ ಸಮುದಾಯದಿಂದ ಆಗಿದೆ. ಇನ್ನು ಮುಂದೆ ಇದೆ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.
1947ರಿಂದ ಇಲ್ಲಿಯವರೆಗೆ ದೇಶದಲ್ಲಿ 1.30 ಲಕ್ಚ ಜನಸಂಖ್ಯೆ ಹೊಂದಿರುವ ಸಿಖ್ ಸಮುದಾಯ ಹಾಗೂ ಅತ್ಯಂತ ಕಡಿಮೆ ಜನಸಂಖ್ಯೆಯಿರುವ ಜೈನ ಸಮುದಾಯ ಬಿಟ್ಟು ಭಾರತ ಸರ್ಕಾರದಲ್ಲಿ ಕ್ಯಾಬಿನೆಟ್ ರಚನೆ ಮಾಡಿಲ್ಲ. ಆದರೆ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಂಗಾಯಿತ ಸಮುದಾಯಕ್ಕೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಇನ್ನುಮುಂದಾದರೂ ಎಲ್ಲರೂ ಒಗ್ಗಟ್ಟಾಗಿ ಸಂಘಟಿತಾರಾಗುವ ಮೂಲಕ ರಾಜಕೀಯ ಸ್ಥಾನಮಾನ ಪಡೆಯಲು ಹೋರಾಟ ಮಾಡಬೇಕಿದೆ ಎಂದರು.
ಕಾರ್ಯಕ್ರಮವನ್ನು ಶಾಸಕ ಬಿಜಿ ಗೋವಿಂದಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್ ಲಿಂಗಮೂರ್ತಿ, ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಮಾಜಿ ಶಾಸಕ ಟಿಎಚ್ ಬಸವರಾಜ್ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.