ಬೆಂಗಳೂರು: ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಪಾನಿಪೂರಿ, ಕಬಾಬ್ ಹಾಗೂ ಶವರ್ಮಾದಲ್ಲಿ ಕೃತಕ ಬಣ್ಣ ನಿಷೇಧಿಸಿದ ಬೆನ್ನಲ್ಲೇ ಇದೀಗ ಚಹಾದಲ್ಲೂ ಹಾನಿಕಾರಕ ಅಂಶ ಪತ್ತೆಯಾಗಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವ ಚಹಾವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪರೀಕ್ಷೆಗೊಳಪಡಿಸಿದ್ದು, ಚಹಾದಲ್ಲಿ ಅಧಿಕ ಪ್ರಮಾಣದ ಕೀಟನಾಶಕ ಮತ್ತು ಬಣ್ಣವನ್ನು ಬಳಸುವುದನ್ನು ಪತ್ತೆ ಹಚ್ಚಿದೆ ಕಬಾಬ್, ಗೋಬಿ ಮಂಚೂರಿ, ಶವರ್ಮಾ, ಚಹಾ ಸೇರಿದಂತೆ ಬಹುತೇಕ ಆಹಾರ ಪದಾರ್ಥಗಳಲ್ಲಿ ರುಚಿ ಮತ್ತು ಬಣ್ಣ ಹೆಚ್ಚಿಸಲು ಕೀಟನಾಶಕ ಮತ್ತು ರಸಗೊಬ್ಬರಗಳಲ್ಲಿ ಬಳಸುವ ರಾಸಾಯನಿಕಗಳನ್ನು ಬಳಸಲಾಗುತ್ತಿದೆ.
ಈ ಅಂಶಗಳು ಕ್ಯಾನ್ಸರ್ ಗೆ ಕಾರಣವಾಗುತ್ತವೆ. ಚಹಾ ತೋಟಗಳಲ್ಲೇ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕಗಳನ್ನು ಬಳಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಟೀ ತೋಟಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಅಧಿಕ ಪ್ರಮಾಣದ ಕೀಟನಾಶಕ ಬಳಕೆಯಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವುದು ಸರ್ಕಾರದ ಆತಂಕವಾಗಿದೆ. ಚಹಾವನ್ನು ಅತಿ ಹೆಚ್ಚು ಬಳಸುವ ಉತ್ತರ ಕರ್ನಾಟಕದ ಚಹಾ ಅಂಗಡಿಗಳಿಂದ 48 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಬಾಗಲಕೋಟೆ, ಬೀದರ್, ಗದಗ, ವಿಜಯನಗರ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಿಂದ ಈ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೊಳಪಡಿಸಿದಾಗ ಅಧಿಕ ಪ್ರಮಾಣದ ಕೀಟನಾಶಕಗಳನ್ನು ಬೆರೆಸಿರುವುದು ಪತ್ತೆಯಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಚಹಾ ಉತ್ಪಾದಕರ ವಿರುದ್ಧ ಕ್ರಮ ಜರುಗಿಸಲು ಚಿಂತನೆ ನಡೆಸಿದ್ದೇವೆ.
ಗ್ರಾಹಕರು ಕಳಪೆ ಗುಣಮಟ್ಟದ ಅಥವಾ ಭಾರೀ ಪ್ರಮಾಣದಲ್ಲಿ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಮತ್ತು ಗುಣಮಟ್ಟದ ಆಹಾರವನ್ನು ಬಳಸಬೇಕು ಎನ್ನುವುದು ನಮ್ಮ ಉದ್ದೇಶ. ಬಣ್ಣ ಮತ್ತು ರುಚಿ ಹೆಚ್ಚಿಸಲು ಬಳಸುವ ರಾಸಾಯನಿಕಗಳನ್ನು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ನಮ್ಮ ಕಾಳಜಿ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಚಹಾ ತೋಟಗಳ ಮಾಲೀಕರು ಮತ್ತು ಚಹಾ ಸಂಸ್ಕರಣೆ ಮಾಡುವವರಿಬ್ಬರೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಮತ್ತು ರಾಸಾಯನಿಕಗಳನ್ನು ಬಳಸುತ್ತಿರುವುದು ಖಚಿತವಾಗಿದೆ ಎಂದು ಅವರು ಹೇಳಿದರು. ಚಹಾ ತೋಟಗಳಲ್ಲೇ ಅಧಿಕ ಪ್ರಮಾಣದ ಅಧಿಕ ಪ್ರಮಾಣದ ರಾಸಾಯನಿಕಗಳನ್ನು ಬಳಸುವುದು ಪ್ರಯೋಗಾಲಯಗಳ ಪರೀಕ್ಷೆಗಳಿಂದ ದೃಢಪಟ್ಟಿದೆ. ತುಸು ಹೆಚ್ಚೇ ಅನ್ನಿಸುವುಷ್ಟು ರಾಸಾಯನಿಕಗಳನ್ನು ಬಳಸಲಾಗಿದೆ. ಆದ್ದರಿಂದ ಚಹಾದಲ್ಲಿ ಕೀಟನಾಶಕ ಬಳಕೆಯನ್ನು ನಿಯಂತ್ರಿಸಲು ಅಭಿಯಾನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.