ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಶ್ರೀನಿವಾಸ ಥಾಣೇದಾರ ಅವರು ಅಮೆರಿಕ ಸಂಸತ್ತಿಗೆ 2ನೇ ಬಾರಿಗೆ ಚುನಾಯಿತರಾಗಿದ್ದಾರೆ. ಕಮಲಾ ಹ್ಯಾರಿಸ್ ನೇತೃತ್ವದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಿಷಿಗನ್ ರಾಜ್ಯದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿರುವ ಅವರು, 2020ರಲ್ಲಿಯೂ ಇದೇ ರಾಜ್ಯ, ಪಕ್ಷದಿಂದ ಆಯ್ಕೆಯಾಗಿದ್ದರು.
1955ರ ಫೆ.22ರಂದು ಚಿಕ್ಕೋಡಿಯಲ್ಲಿ ಜನಿಸಿದ ಥಾಣೇದಾರ, ಬೆಳಗಾವಿಯ ಮೀರಾಪುರ ಗಲ್ಲಿಯಲ್ಲಿ ತಮ್ಮ ಬಾಲ್ಯ ಕಳೆದರು. ಅವರ ತಂದೆ ಬೆಳಗಾವಿಯ ನ್ಯಾಯಾಲಯದಲ್ಲಿ ನೌಕರರಾಗಿದ್ದರು. ಬೆಳಗಾವಿಯ ಸರ್ಕಾರಿ ಚಿಂತಾಮಣರಾವ್ ಶಾಲೆ ಮತ್ತು ಪಿಯುಸಿ ಕಾಲೇಜಿನಲ್ಲಿ ಅವರು ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಮುಗಿಸಿ, ಮುಂಬೈ ವಿವಿಯಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಎಂಎಸ್‌ಸಿ ವ್ಯಾಸಂಗ ಮಾಡಿದ್ದಾರೆ. 1979ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿ, ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಪಿಎಚ್‌ಡಿ ಪಡೆದಿರುವ ಅವರು ಅಮೆರಿಕದ ಮಿಷಿಗನ್ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ, ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ, ಉದ್ಯಮಿಯಾದ ಥಾಣೇದಾರ್, ಈಗ ಅಮೆರಿಕ ಸಂಸತ್ ಪ್ರತಿನಿಧಿಯಾಗಿದ್ದಾರೆ. ಜೊತೆಗೆ ವಿಜ್ಞಾನಿ, ಉದ್ಯಮಿ ಮತ್ತು ಇಂಗ್ಲಿಷ್ ಸಾಹಿತಿಯೂ ಆಗಿದ್ದಾರೆ.