ಬೆಂಗಳೂರು: ಡಾ.ರಾಜ್‌ಕುಮಾರ್ ವಂಶದ ಕುಡಿ, ನಟ ಯುವ ರಾಜ್‌ಕುಮಾರ್ (Yuva Rajkumar) ಅವರು ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರಿಗೆ ಡಿವೋರ್ಸ್ ನೋಟಿಸ್ ನೀಡಿದ ವಿಚಾರ ಕೆಲವು ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಈ ನೋಟಿಸ್‌ಗೆ ಸಂಬಂಧಿಸಿ ಇಂದು (ಜುಲೈ 4) ನಡೆಯಬೇಕಾಗಿದ್ದ ವಿಚಾರಣೆ ಮುಂದೂಡಲಾಗಿದೆ. ಆರಂಭಿಕ ವಿಚಾರಣೆ ಬಳಿಕ, ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಲಾಗಿದೆ.
ಯುವ ರಾಜ್ ಕುಮಾರ್ ಸಲ್ಲಿಸಿರುವ ವಿಚ್ಛೇದನಕ್ಕೆ ಶ್ರೀದೇವಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಬಗ್ಗೆ ವಾದ ಮಂಡಿಸಲು ಶ್ರೀದೇವಿ ಪರ ವಕೀಲರು ಅವಕಾಶ ಕೇಳಿದರು. ಇದಕ್ಕೆ ಅವಕಾಶ ನೀಡದ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾದ್ದರಿಂದ ಮೊದಲು ಕೌನ್ಸಲಿಂಗ್ ಆಗಬೇಕು.ಕೌನ್ಸಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಮೀಡಿಯೇಟರ್ ಕೌನ್ಸಲಿಂಗ್ ನಡೆದ ಬಳಿಕವಷ್ಟೆ ಪ್ರಕರಣದ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ ಎಂದುನ್ಯಾಯಾಧೀಶೆ ಕಲ್ಪನಾ ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಿದ್ದಾರೆ.
ಡಿವೋರ್ಸ್ ಪ್ರಕರಣ ವಿಚಾರವಾಗಿ ಅಮೆರಿಕದಿಂದ ಬಂದಿದ್ದ ಶ್ರೀದೇವಿ ವಿಚಾರಣೆಗೆ ಹಾಜರಾಗದೆ ಅಮೆರಿಕಕ್ಕೆ ಹಿಂತಿರುಗುತ್ತಿರುವ ವಿಷಯ ಸದ್ಯ ಕುತೂಹಲ ಮೂಡಿಸಿದೆ. ಹಾರ್ವರ್ಡ್‌ನಲ್ಲಿ ಶಿಕ್ಷಣ ಮುಂದುವರಿಸುವ ಸಲುವಾಗಿ ಭಾರತದಿಂದ ಅಮೆರಿಕಕ್ಕೆ ಹೋಗುತ್ತಿರುವುದಾಗಿ ಶ್ರೀದೇವಿ ತಿಳಿಸಿದ್ದಾರೆ. ತನ್ನ ಮೇಲೆ ಮಾಡಿರುವ ಆರೋಪಗಳಿಗೆ ತಕ್ಕ ಉತ್ತರ ಕೊಡ್ತೀನಿ. ನಾನು ಬಿಟ್ಟು ಕೊಡಲ್ಲ, ಸರಿಯಾದ ಸಮಯ ಬಂದಾಗ ಮತ್ತೆ ವಾಪಾಸ್ ಬರ್ತೀನಿ ಎಂದಿದ್ದಾರೆ.