ಭಾರತೀಯ ಚಿತ್ರರಂಗದ ಬಹುಭಾಷಾ ಪ್ರತಿಭಾನ್ವಿತ ಸಜ್ಜನ ನಟ ರಮೇಶ್ ಅರವಿಂದ್‍ಗೆ ಇಂದು ಜನುಮ ದಿನದ ಸಂಭ್ರಮ. ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ನಟ ರಮೇಶ್ ಇಂದಿಗೂ ಕೂಡ ಬೇಡಿಕೆಯ ನಟ. ರಮೇಶ್ ಇಂದು 56ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದು, ಅವರಿಗೆ ಅಭಿನಂದನಗಳ ಮಹಾಪೂರ ಹರಿದು ಬಂದಿದೆ. ರಮೇಶ್ ಅರವಿಂದ್ ಒಬ್ಬ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೊದರೆ ಅವರ ಬಹುಮುಖ ಪ್ರತಿಭೆ ಅನಾವರಣಗೊಳ್ಳುತ್ತಾ ಹೊಗುತ್ತದೆ. ಕುಟುಂಬ ಸಮೇತರಾಗಿ ನೋಡಬಹುದಾದ ಉತ್ತಮ ಕಾರ್ಯಕ್ರಮಗಳು ಪ್ರೀತಿಯಿಂದ ರಮೇಶ್, ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮಗಳು ಕನ್ನಡಿಗರ ಹೃದಯ ಗೆದ್ದಿವೆ. ಇವರ ಮಾತಿನ ಶೈಲಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.
ರಮೇಶ್ ಕೆ. ಬಾಲಚಂದರ್ ರವರ ಗರಡಿಯಲ್ಲಿ ಬೆಳೆದ ಪ್ರತಿಭೆ, ಸುಂದರ ಸ್ವಪ್ನಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಇವರು ಇಲ್ಲಿಯವರೆಗೂ 100ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜೊತೆ ತಮಿಳು, ತೆಲುಗು, ಹಿಂದಿ ಮಲಯಾಳಂ, ಚಿತ್ರಗಳಲ್ಲೂ ನಟಿಸಿ ಸಹಿ ಎನಿಸಿಕೊಂಡಿದ್ದಾರೆ.
ರಮೇಶ್ ಅವರು ಇಂಜಿನಿಯರಿಂಗ್ ಕಲಿತಿದ್ದರೂ ಇವರನ್ನು ಹೆಚ್ಚಾಗಿ ಕಾಡಿದ್ದ ಸಿನಿಮಾ, ರಂಗಭೂಮಿ. ಅತ್ಯಂತ ಚತುರ, ವಾಕ್ಚತುರ್ಯ ಹೊಂದಿರಿವ ರಮೇಶ್ ಮಾತಿಗೆ ಸೋಲಿಲ್ಲದವರಿಲ್ಲ. ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಅಮೃತವರ್ಷಿಣಿ, ಅನುರಾಗ ಸಂಗಮ, ಹೀಗೆ ಹಲವಾರು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದಿರುವ ರಮೇಶ್ ಅರವಿಂದ್ ತ್ಯಾಗರಾಜನೆಂದೆ ಖ್ಯಾತಿ ಪಡೆದಿದ್ದಾರೆ.