ಮಳೆಗಾಲ (rainy season) ಆರಂಭವಾಯಿತೆಂದರೆ ಡೆಂಗ್ಯೂ (Dengue), ಮಲೇರಿಯಾ (Malaria) ಮತ್ತು ಚಿಕೂನ್‌ಗುನ್ಯಾದಂತಹ (Chikungunya) ರೋಗ ಹರಡುವಿಕೆಯು ಆರಂಭವಾಯಿತು ಎಂದೇ ತಿಳಿದುಕೊಳ್ಳಬೇಕಾದ ಕಾಲ. ಸೊಳ್ಳೆಗಳ ಸಂತಾನೋತ್ಪತ್ತಿಯ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಆರೋಗ್ಯದ ಮೇಲೆ ಭಾರಿ ಪರಿಣಾಮ ಉಂಟಾಗುತ್ತದೆ. ಹೀಗಾಗಿ ನಾವು ಮಳೆಗಾಲದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವುದು ಬಹುಮುಖ್ಯ. ಮನೆ ಹಾಗೂ ಸುತ್ತಮುತ್ತ ಸೊಳ್ಳೆಗಳ (Mosquito Repellents) ಸಂತಾನೋತ್ಪತ್ತಿ ಆಗದಂತೆ ತಡೆಯುವುದು, ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹು ಮುಖ್ಯವಾಗಿದೆ.
ಸೊಳ್ಳೆಗಳನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳಿವೆ. ಆದರೆ ಅವುಗಳಲ್ಲಿ ಹೆಚ್ಚಿನವು ಅಲರ್ಜಿ ಮತ್ತು ಚರ್ಮದ ಸೋಂಕನ್ನು ಉಂಟು ಮಾಡುತ್ತವೆ. ಆದ್ದರಿಂದ ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯಲ್ಲೇ ನಾವು ಸೊಳ್ಳೆ ನಿವಾರಕಗಳನ್ನು ಸಿದ್ಧಪಡಿಸಿಕೊಳ್ಳಬಹುದು.
ಸೊಳ್ಳೆಗಳು ಮನೆಯೊಳಗೆ ಬಾರದಂತೆ ಬಳಸಬಹುದಾದ 10 ನೈಸರ್ಗಿಕ ಸೊಳ್ಳೆ ನಿವಾರಕಗಳ ಕುರಿತು ಮಾಹಿತಿ ಇಲ್ಲಿದೆ. ನೀವು ಮನೆಯಲ್ಲಿ ಇದನ್ನು ಮಾಡಿ ನೋಡಿ. ಸೊಳ್ಳೆಗಳನ್ನು ಮನೆಯಿಂದ ದೂರ ಮಾಡಿ.
1. ಬೆಳ್ಳುಳ್ಳಿ ನೀರು
ಸೊಳ್ಳೆಗಳನ್ನು ತೊಡೆದು ಹಾಕಲು ಬೆಳ್ಳುಳ್ಳಿ ನೀರು ಅತ್ಯುತ್ತಮ ದ್ರಾವಣ. ಹಲವಾರು ಔಷಧೀಯ ಗುಣವಿರುವ ಬೆಳ್ಳುಳ್ಳಿಯ ಕೆಲವು ಎಸಳು ಮತ್ತು ಸ್ವಲ್ಪ ಲವಂಗವನ್ನು ಪುಡಿ ಮಾಡಿ ಅನಂತರ ನೀರಿನಲ್ಲಿ ಕುದಿಸಬೇಕು. ಅದರ ದ್ರಾವಣವನ್ನು ಸ್ಪ್ರೇ ಬಾಟಲಿಯಲ್ಲಿ ಸುರಿದು ಅದನ್ನು ಕೋಣೆಯ ಸುತ್ತಲೂ, ಎಲ್ಲಾ ಹೊರಾಂಗಣ ಬಲ್ಬ್, ಗ್ಯಾರೇಜ್ ಬಳಿ ಸಿಂಪಡಿಸಿ. ಈ ದ್ರಾವಣವು ಸೊಳ್ಳೆಗಳನ್ನು ತಕ್ಷಣವೇ ಕೊಲ್ಲುತ್ತದೆ.
2. ಮಜ್ಜಿಗೆ ಸೊಪ್ಪು
ಮಜ್ಜಿಗೆ ಸೊಪ್ಪು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಸ್ಯಗಳಾಗಿವೆ. ಇದರ ಎಣ್ಣೆಯು ಸೊಳ್ಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮಜ್ಜಿಗೆ ಸೊಪ್ಪುನ ಎಲೆಗಳನ್ನು ಪುಡಿ ಮಾಡಿ ತಯಾರಿಸಿದ ಎಣ್ಣೆಯುಕ್ತ ಮಿಶ್ರಣವನ್ನು ನೇರವಾಗಿ ಚರ್ಮಕ್ಕೆ ಅನ್ವಯಿಸಬಹುದು. ಇದರಿಂದ ಹಲವು ಗಂಟೆಗಳವರೆಗೆಸೊಳ್ಳೆ ಕಚ್ಚದಂತೆ ಅದು ತಡೆಯುತ್ತದೆ. ಈ ಎಣ್ಣೆಯು ಕಡಿಮೆ ಸಾಂದ್ರತೆಯನ್ನು ಹೊಂದಿರುವ ಕಾರಣ ಪದೇ ಪದೇ ಬಳಸುವ ಅಗತ್ಯವಿರುತ್ತದೆ.
3. ವಿನೆಗರ್
ಸೊಳ್ಳೆ ನಿವಾರಣೆ ಮಾಡುವಲ್ಲಿ ವಿನೆಗರ್ ಕೂಡ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಆಪಲ್ ಸೈಡರ್ ವಿನೆಗರ್ ಅಥವಾ ಸಾಮಾನ್ಯ ವಿನೆಗರ್ ಆಗಿರಲಿ ಸೊಳ್ಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. 3 ಕಪ್ ನೀರು ಮತ್ತು 1 ಕಪ್ ವಿನೆಗರ್ ಅನ್ನು ಸ್ಪ್ರೇ ಬಾಟಲಿಯಲ್ಲಿ ತೆಗೆದುಕೊಂಡು ಅದನ್ನು ನೇರವಾಗಿ ಚರ್ಮದ ಮೇಲೆ ಅಥವಾ ಡೈನಿಂಗ್ ಟೇಬಲ್ ಮತ್ತು ಮನೆಯ ಪರದೆಯ ಸುತ್ತಲೂ ಸಿಂಪಡಿಸಿದರೆ ಮನೆಯಿಂದ ಸೊಳ್ಳೆಯನ್ನು ದೂರ ಮಾಡಬಹುದು.
4. ನಿಂಬೆ ಮತ್ತು ಲವಂಗ
ಸೊಳ್ಳೆಗಳನ್ನು ದೂರವಿಡಲು ಅರ್ಧ ನಿಂಬೆ ಮತ್ತು ಕೈ ತುಂಬ ಲವಂಗವು ಅದ್ಭುತ ಅಂಶವಾಗಿದೆ. ನಿಂಬೆ ಸ್ಲೈಸ್ ಅನ್ನು ತೆಗೆದುಕೊಂಡು, ಅದರಲ್ಲಿ ಕೆಲವು ಲವಂಗವನ್ನು ಸೇರಿಸಿ ಮತ್ತು ಕೋಣೆಯಲ್ಲಿ ಇರಿಸಿ. ಈ ಮ್ಯಾಜಿಕ್ ಅಂಶವು ಸೊಳ್ಳೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.
5. ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆಯ ಪರಿಮಳವನ್ನು ಸೊಳ್ಳೆಗಳು ಸಹಿಸುವುದಿಲ್ಲ. ಆದ್ದರಿಂದ ಸೊಳ್ಳೆಗಳನ್ನು ದೂರವಿಡಲು ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದನ್ನು ಸಿಂಪಡಿಸಬಹುದು. ಸೊಳ್ಳೆ ಕಚ್ಚದಂತೆ ತಡೆಯಲು ಚರ್ಮಕ್ಕೂ ಇದರ ಕೆಲವು ಹನಿಗಳನ್ನು ಸಿಂಪಡಿಸಬಹುದು.
6. ತುಳಸಿ
ತುಳಸಿ ಸಮೀಪ ಸೊಳ್ಳೆಗಳು ಬರುವುದಿಲ್ಲ. ಇದರಿಂದಲೂ ಎಣ್ಣೆ ತಯಾರಿಸಿ ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಇದು ಸೊಳ್ಳೆಗಳನ್ನು ನಮ್ಮಿಂದ ದೂರವಿರಿಸುತ್ತದೆ. ಮನೆ ಸುತ್ತಮುತ್ತ ತುಳಸಿ ಗಿಡಗಳನ್ನು ನೆಡುವುದು ಕೂಡ ಸೊಳ್ಳೆಯನ್ನು ಮನೆಯಿಂದ ದೂರವಿರುವಂತೆ ಮಾಡುತ್ತದೆ.
7. ಕರ್ಪೂ
ಕರ್ಪೂರವು ಬಹುಮುಖ್ಯ ಸೊಳ್ಳೆ ನಿವಾರಕವಾಗಿದೆ. ಇದರ ದಟ್ಟವಾದ ವಾಸನೆಯು ಸೊಳ್ಳೆಗಳನ್ನು ಓಡಿಸುತ್ತದೆ. ಸುಮಾರು ಕಾಲು ಕಪ್ ನೀರಿಗೆ ಕರ್ಪೂರದ ಎರಡು ಮಾತ್ರೆಗಳನ್ನು ಹಾಕಿ ಕೋಣೆಯ ಸುತ್ತಲೂ ಅಥವಾ ಹೊರಾಂಗಣದಲ್ಲಿ ಸಿಂಪಡಿಸಿ. ಅಲ್ಲದೆ ಕೋಣೆಯಲ್ಲಿ ಕೆಲವು ಕರ್ಪೂರವನ್ನು ಸುಟ್ಟು ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ. ಸುಮಾರು 20 ನಿಮಿಷಗಳ ಕಾಲ ಅದನ್ನು ಉರಿಯಲು ಬಿಡಿ. ಕೋಣೆಯ ಹೊರಗೆ ಇರಿ. ಸೊಳ್ಳೆಗಳು ಮನೆಯಿಂದ ಓಡಿ ಹೋಗುವುದು.
8. ಪುದೀನಾ
ಸೊಳ್ಳೆಗಳನ್ನು ಎದುರಿಸಲು ಪುದೀನಾ ಮತ್ತೊಂದು ನೈಸರ್ಗಿಕ ವಿಧಾನವಾಗಿದೆ. ಪುದೀನಾವನ್ನು ಬಳಸಲು ಸ್ಪ್ರೇ ಬಾಟಲಿಯಲ್ಲಿ ಒಂದು ಕಪ್ ನೀರಿನೊಂದಿಗೆ ಪುದೀನಾ ಎಲೆಯ ತೈಲದ ಕೆಲವು ಹನಿಗಳನ್ನು ಸೇರಿಸಿ. ಚೆನ್ನಾಗಿ ಅಲ್ಲಾಡಿಸಿ ಮತ್ತು ಚರ್ಮದ ಮೇಲೆ ಸಿಂಪಡಿಸಿ. ಪುದೀನಾ ಸ್ಪ್ರೇ ರಕ್ತ ಹೀರುವ ಸೊಳ್ಳೆಗಳನ್ನು ದೂರ ಮಾಡುತ್ತದೆ.
ತೆಂಗಿನ ಎಣ್ಣೆ ಮತ್ತು ಬೇವಿನ ಎಣ್ಣೆಯ ಸಂಯೋಜನೆಯು ನೈಸರ್ಗಿಕ ಸೊಳ್ಳೆ ನಿವಾರಕವಾಗಿದೆ. ತೆಂಗಿನ ಎಣ್ಣೆ ಮತ್ತು ಬೇವಿನ ಎಣ್ಣೆಯನ್ನು ಚೆನ್ನಾಗಿ ನೀರಿನಲ್ಲಿ ಬೆರೆಸಿ ಚರ್ಮದ ಮೇಲೆ ಸಿಂಪಡಿಸಿ. ಅರ್ಧ ದಿನದವರೆಗೆ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಇದು ಸಹಾಯ ಮಾಡುತ್ತದೆ.
ಕಾಫಿ ಬೀಜಗಳು ಸೊಳ್ಳೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಇದು ಪರಿಸರ ಸ್ನೇಹಿ ಪರ್ಯಾಯ ಮಾತ್ರವಲ್ಲ ಕಾಫಿ ಬೀಜಗಳ ಮರು ಬಳಕೆ ಮಾಡಲು ಇದು ಉತ್ತಮ ಮಾರ್ಗವಾಗಿದೆ. ಕಾಫಿ ಬೀಜಗಳನ್ನು ಸುಟ್ಟು ಅದರಿಂದ ಬರುವ ಹೊಗೆಯು ಸೊಳ್ಳೆಗಳನ್ನು ಮನೆಯಿಂದ ದೂರ ಓಡಿಸುತ್ತದೆ.