ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು 60 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಎರಡನೇ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ 113 ಸಾಕ್ಷಿಗಳನ್ನು ಒಳಗೊಂಡ 1632 ಪುಟಗಳ ಚಾರ್ಜ್ಶೀಟ್ ಅನ್ನು ಸೆ.9ರಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಹೊಳೆನರಸೀಪುರದಲ್ಲಿ 60 ವರ್ಷದ ಮನೆಕೆಲಸದಾಕೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಜೊತೆಗೆ ಪ್ರಕರಣದ ತನಿಖೆ ವೇಳೆ ಸಂತ್ರಸ್ತೆಯನ್ನ ಹೆದರಿಸಿ ಹಲವು ಬಾರಿ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಧೃಡ ಪಟ್ಟಿದೆ.
ಕೃತ್ಯ ಎಸಗುವಾಗ ಪ್ರಜ್ವಲ್ ರೇವಣ್ಣ ಅವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರಿಕರಿಸಿದ್ದರು. ಸಂತ್ರಸ್ತೆ ಕೈಮುಗಿದು ನಿಮ್ಮ ತಾತ ಹಾಗೂ ತಂದೆಗೆ ಊಟ ಬಡಿಸಿದ್ದೇನೆ, ನನ್ನ ಬಿಟ್ಟು ಬಿಡು ಎಂದು ಅಂಗಲಾಚಿದರೂ ಬಿಡದ ಪ್ರಜ್ವಲ್ ರೇವಣ್ಣ ದೌರ್ಜನ್ಯ ಎಸಗಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.