ಬೆಂಗಳೂರು: ಕ್ಯಾನ್ಸರ್‌ಕಾರಕ ಅಂಶ ಪತ್ತೆ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ, ಕಬಾಬ್‌ಗೆ ಬಳಸುವ ಕೃತಕ ಬಣ್ಣ ನಿಷೇಧ ಬೆನ್ನಲ್ಲೇ ಪಾನಿಪುರಿಯಲ್ಲೂ ಅಪಾಯಕಾರಿ ಅಂಶಗಳು ಪತ್ತೆಯಾಗಿದ್ದು, ಪಾನಿಪುರಿಪ್ರಿಯರಿಗೂ ಆತಂಕ ಎದುರಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪಾನಿಪುರಿ ಪ್ರಿಯರಿಗೂ ಶಾಕ್ ನೀಡಲು ತಯಾರಿ ನಡೆಸಿದೆ. ಗೋಬಿ, ಕಬಾಬ್ ಬಳಿಕ ಈಗ ಪಾನಿಪುರಿಗೆ ಬಳಸುವ ಸಾಸ್, ಮೀಟಾ ಖಾರದ ಪುಡಿ ಸೇರಿದಂತೆ ಐದು ಬಗೆಯ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಪಾನಿಪುರಿ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದೆ. ಕ್ಯಾನ್ಸರ್‌ಕಾರಕ ಅಂಶ ಪತ್ತೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳುಳ್ಳ ಪದಾರ್ಥಗಳನ್ನು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧರಿಸಿದೆ.
ಬೆಂಗಳೂರಿನ 49 ಕಡೆ ಪಾನಿಪುರಿ ತಯಾರಿಕೆಗೆ ಕ್ಯಾನ್ಸರ್‌ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿದ್ದಾರೆ. ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹೀಗಾಗಿ ಕ್ಯಾನ್ಸರ್ ಕಾರಕ ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, ಪಾನಿಪುರಿ ಬಗ್ಗೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 243 ಮಾದರಿಗಳನ್ನು ಸಂಗ್ರಹಿಸಿದ್ದೆವು. 41 ಮಾದರಿಗಳಲ್ಲಿ ಅಸುರಕ್ಷಿತ ಎಂಬುದು ಗೊತ್ತಾಗಿದೆ. 18 ಮಾದರಿಗಳು ಕಳಪೆ ಗುಣಪಟ್ಟದಿಂದ ಕೂಡಿವೆ. ಪಾನಿಪುರಿಯಲ್ಲಿ 4-5 ರಾಸಾಯನಿಕಗಳನ್ನು ಬಳಸಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಇನ್ನೂ 4-5 ಮಾದರಿಗಳ ಫಲಿತಾಂಶ ಬರಬೇಕಿದೆ. ಅವು ಬಂದ ಬಳಿಕ ಸಭೆ ನಡೆಸಿ, ಬಳಿಕ ಪಾನಿಪುರಿಗೆ ಬಳಸುವ ರಾಸಾಯನಿಕಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ ಎಂದರು. ಪಾನಿಪುರಿಯಲ್ಲಿ ಬಳಸುವ ಕಾರ ಹಾಗೂ ಮಿಟಾದಲ್ಲಿ ರಾಸಾಯನಿಕಗಳು ಪತ್ತೆಯಾಗಿವೆ. ಕಾರ ಹೆಚ್ಚಾಗಿ ತಿನ್ನುವುದರಿಂದ ಅಸಿಡಿಟಿ, ಭೇದಿಯಾಗುತ್ತದೆ. ಹೆಚ್ಚಿಗೆ ಕಾರ ಇರುವ ಪಾನಿಪುರಿಯನ್ನು 5-7 ವರ್ಷ ತಿಂದರೆ ಅಲ್ಸರ್ ಮತ್ತು ಕ್ಯಾನ್ಸರ್ ರೋಗ ಬರುತ್ತದೆ ಎಂದು ಹೇಳಿದರು.