ನವದೆಹಲಿ: ಸಂಸತ್‌ನಲ್ಲಿ ನಡೆಯುತ್ತಿರುವ ಅಧಿವೇಶನ (Parliament Session)ದಲ್ಲಿ ಇಂದು ವಕ್ಫ್ ಮಸೂದೆ (Waqf Act) ಮಂಡನೆಯಾಗಲಿದ್ದು, ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ವಕ್ಫ್ ಕಾಯ್ದೆ 1995ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ವಕ್ಫ್ (ತಿದ್ದುಪಡಿ) ಮಸೂದೆ 2024 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಪರಿಚಯಿಸಲು ಸಜ್ಜಾಗಿರುವುದರಿಂದ ಸಂಸತ್ತಿನ ಕಲಾಪಗಳು ಗುರುವಾರ ಕೋಲಾಹಲದಿಂದ ಕೂಡಿರಲಿದೆ.
ಮಸೂದೆಯನ್ನು ಪರಿಚಯಿಸಿದ ನಂತರ ಪರಿಶೀಲನೆಗಾಗಿ ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ಪ್ರತಿಪಕ್ಷಗಳು ಬುಧವಾರ ಆಗ್ರಹಿಸಿವೆ. ಈ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರವು ವ್ಯವಹಾರ ಸಲಹಾ ಸಮಿತಿಗೆ ಈಗಾಗಲೇ ತಿಳಿಸಿದೆ.
ಮಸೂದೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಮಸೂದೆ ಮಂಡಿಸಿದ ನಂತರ ಪರಿಶೀಲನೆಗಾಗಿ ಸಂಸತ್ತಿನ ಸಮಿತಿಗೆ ಕಳುಹಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಾತ್ರವಲ್ಲ ಇಂದು ಸಂಸತ್ತಿನಲ್ಲಿ ಈ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲು ಪ್ರತಿಪಕ್ಷಗಳು ಸಜ್ಜಾಗಿವೆ.