ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ನಡೆಯುತ್ತಿದೆ (Parliament Sessions). ಈ ಬಾರಿ ಪ್ರತಿಪಕ್ಷ ಬಹಳಷ್ಟು ಬಹಳಷ್ಟು ಪ್ರಬಲವಾಗಿರುವುದರಿಂದ ಕಾವೇರಿದ ಚರ್ಚೆ ನಡೆಯುತ್ತಿದೆ. ಸೋಮವಾರ ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ (Rahul Gandhi) ಸರ್ಕಾರದ ಬೆವರಿಳಿಸಿದ್ದಾರೆ. ನೀಟ್ (NEET) ವಿವಾದ ಚರ್ಚೆ ನಡೆಸಬೇಕೆಂಬ ಬೇಡಿಕೆ ಮುಂದಿಟ್ಟು ಅವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇಂದು (ಜುಲೈ 2) ನರೇಂದ್ರ ಮೋದಿ (Narendra Modi) ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಆರೋಪಗಳಿಗೆ ಉತ್ತರ ನೀಡಲಿದ್ದಾರೆ.
ಪ್ರತಿಪಕ್ಷಗಳ ನಾಯಕನಾದ ಬಳಿಕ ರಾಹುಲ್ ಗಾಂಧಿ ಸೋಮವಾರ ಮೊದಲ ಬಾರಿ ಲೋಕಸಭೆಯಲ್ಲಿ ಮಾತನಾಡಿದ್ದು, ಇಂದು ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಮೋದಿ ಉತ್ತರವನ್ನು ನೀಡಲಿದ್ದಾರೆ.
ಸಂಸತ್ತಿನಲ್ಲಿ ಭಾಷಣ ಮಾಡುವ ಮೊದಲು, ಮೋದಿ ಬೆಳಿಗ್ಗೆ 9:30ಕ್ಕೆ ಎನ್‌ಡಿಎ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಆಡಳಿತಾರೂಢ ಬಣದ ಸಂಸದರನ್ನುದ್ದೇಶಿಸಿ ಮೋದಿ ನಡೆಸುವ ಮೊದಲ ಭಾಷಣ ಇದಾಗಿರಲಿದೆ. 2014ರ ನಂತರ ಮೊದಲ ಬಾರಿಗೆ ಬಿಜೆಪಿ ಬಹುಮತ ಕಳೆದುಕೊಂಡಿರುವುದರಿಂದ ಮತ್ತು ಆಡಳಿತ ನಡೆಸಲು ಮಿತ್ರಪಕ್ಷಗಳನ್ನು ಅವಲಂಬಿಸಬೇಕಿರುವಿದರಿಂದ ಈ ಬೆಳವಣಿಗೆ ಮಹತ್ವವನ್ನು ಪಡೆದುಕೊಂಡಿದೆ. 543 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದರೆ, ಮಿತ್ರಪಕ್ಷಗಳು 53 ಸ್ಥಾನಗಳಲ್ಲಿ ಜಯಗಳಿಸಿವೆ.
ಆರಂಭದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಶುಕ್ರವಾರ ನಿಗದಿಪಡಿಸಲಾಗಿತ್ತು. ಆದರೆ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಪ್ರತಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.