ಬೆಂಗಳೂರು: ಮಸೀದಿಯೊಂದರ ಬಳಿ ಜೈ ಶ್ರೀರಾಮ್ ಘೋಷಣೆ ಕೂಗಿದ ಪ್ರಕರಣವನ್ನು ಹೈಕೋರ್ಟ್ ರದ್ದು ಪಡಿಸಿ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಮಸೀದಿ ಬಳಿ ನುಗ್ಗಿ ಜೈ ಶ್ರೀ ರಾಮ್ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ಪುತ್ತೂರಿನ ಬಿಳಿನೆಲೆಯ ಕೀರ್ತನ್ ಕುಮಾರ್ (28) ಹಾಗೂ ಎನ್.ಎಂ.ಸಚಿನ್ ಕುಮಾರ್ (26) ಅವರನ್ನು ಬಂಧಿಸಲಾಗಿತ್ತು.
ಬಂಧನಕ್ಕೊಳಗಾಗಿದ್ದ ಇಬ್ಬರು ಕ್ರಿಮಿನಲ್ ಪ್ರಕರಣ ರದ್ದು ಮಾಡುವಂತೆ ರಿಟ್ ಅರ್ಜಿಸಲ್ಲಿಸಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಪ್ರಕರಣ ರದ್ದು ಮಾಡಿ ಆದೇಶಿಸಿದೆ.
ನ್ಯಾಯಾಲಯದ ಅಭಿಪ್ರಾಯ:
ಹಿಂದೂ, ಮುಸಲ್ಮಾನರು ಸೌರ್ಹಾದತೆಯಿಂದ ಜೀವಿಸುತ್ತಿದ್ದೇವೆ ಎಂದು ಸ್ವತಃ ದೂರುದಾರರೇ ಹೇಳಿದ್ದಾರೆ. ಆದ್ರೂ ಅರ್ಜಿದಾರರ ವಿರುದ್ಧ ಐಪಿಸಿ ಕಲಂ 295ಎ ಅಡಿ ಧಾರ್ಮಿಕ ಭಾವನೆ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಲಾಗಿದೆ ಎಂದು ಕೇಸ್ ದಾಖಲಿಸಿದ್ದರಲ್ಲ. ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಈ ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟು ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.
ಪ್ರಕರಣ ಹಿನ್ನೆಲೆ:
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕು ಐತ್ತೂರು ಗ್ರಾಮದ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿ ಬಳಿ ಸೆ.24ರಂದು ರಾತ್ರಿ 10.50ರಲ್ಲಿ ಅಕ್ರಮವಾಗಿ ಪ್ರವೇಶಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆಂಬ ಆರೋಪಿಸಲಾಗಿತ್ತು.
ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆ ಎಂದು ಮಸೀದಿಯ ಸಿಬ್ಬಂದಿ ಕೀರ್ತನ್ ಕುಮಾರ್ ಮತ್ತು ಎನ್.ಎಂ.ಸಚಿನ್ ಕುಮಾರ್ ಅವರ ವಿರುದ್ಧ ದೂರು ನೀಡಿದ್ದರು. ಕಡಬ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಈ ಎಫ್ಐಆರ್ ರದ್ದು ಮಾಡುವಂತೆ ಕೀರ್ತನ್ ಮತ್ತು ಸಚಿನ್ ಅವರು ಹೈಕೋರ್ಟಗೆ ಅರ್ಜಿ ಸಲ್ಲಿಸಿದ್ದರು.