ಬೆಂಗಳೂರು – ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮ ಕಳೆದೆರಡು ದಿನಗಳಿಂದ ನೈರುತ್ಯ ಮುಂಗಾರು ಚೇತರಿಸಿಕೊಂಡಿದೆ.ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಅನಂತರ ಮತ್ತೆ ಮಳೆ ಪ್ರಮಾಣ ಕಡಿಮೆಯಾಗಲಿದೆ.
ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಜಿಲ್ಲಾವಾರು ಮುನ್ನೆಚ್ಚರಿಕೆಯನ್ನು ನೀಡಿದೆ. ನಾಳೆಯಿಂದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಿತ್ತಳೆ ಎಚ್ಚರಿಕೆ (ಆರೆಂಜ್ ಅಲರ್ಟ್) ಘೋಷಣೆ ಮಾಡಿದೆ.ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳು ಕಂಡುಬಂದಿದ್ದು, ಹವಾಮಾನ ಇಲಾಖೆ ಕೆಂಪು ಎಚ್ಚರಿಕೆ (ರೆಡ್ ಅಲರ್ಟ್) ಘೋಷಿಸಿದೆ. ಬೆಂಗಳೂರು ಸೇರಿದಂತೆ ನಿನ್ನೆ ಹಲವು ಕಡೆಗಳಲ್ಲಿ ಮಳೆಯಾಗಿದೆ. ಇಂದು ದಕ್ಷಿಣ ಒಳನಾಡಿನಲ್ಲೂ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಮೇಲೈ ಗಾಳಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಧಾರವಾಡ, ಬೆಳಗಾವಿ ಹಾಗೂ ಕರಾವಳಿ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.
ನಾಳೆಯಿಂದ ಜೂ.25 ರವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಕೆಲವೆಡೆ ಅತೀ ಬಾರಿ ಮಳೆಯಾಗುವ ಮುನ್ಸೂಚನೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರು, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಕೆಂಪು ಎಚ್ಚರಿಕೆ ಘೋಷಿಸಲಾಗಿದೆ.
ಆಯಾ ಜಿಲ್ಲಾಡಳಿತಕ್ಕೆ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚನೆ ನೀಡಲಾಗಿದೆ. ನಿಗದಿತ ಅವಧಿಗಿಂತ ಮುಂಚೆಯೇ ಮುಂಗಾರು ಆರಂಭವಾಗಿದ್ದು, ಜೂ.12 ರವರೆಗೂ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಅನಂತರ ಮುಂಗಾರು ದುರ್ಬಲಗೊಂಡು ಚದುರಿದಂತೆ ಮಾತ್ರ ಮಳೆಯಾಗಿತ್ತು. ಜೂ.20 ರ ನಂತರ ಮತ್ತೆ ಚುರುಕಾಗಿರುವ ಮುಂಗಾರು ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಹಾಗೂ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.