ಬಾಂಗ್ಲಾದೇಶ (ಢಾಕಾ): ಪ್ರಸ್ತುತ ಹಿಂದೂಗಳ ಮೇಲಿನ ದಾಳಿ, ದೇಗುಲಗಳ ಮೇಲಿನ ದಾಳಿಯ ಮೂಲಕ ಸುದ್ದಿಯಲ್ಲಿರುವ ನೆರೆಯ ಬಾಂಗ್ಲಾದೇಶ ಇದೀಗ ಇಸ್ಲಾಮಿಕ್ ದೇಶವಾಗಿ ಬದಲಾಗುವತ್ತ ಹೆಜ್ಜೆ ಇಟ್ಟಿರುವ ಸುಳಿವು ನೀಡಿದೆ. ಇಂಥದ್ದೊಂದು ಗುಮಾನಿಗೆ ಪೂರಕವಾಗುವಂತೆ, ದೇಶದ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದ ಪದ ತೆಗೆದುಹಾಕುವಂತೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.
ಅಲ್ಲದೆ ವಂಗಬಂಧು’ ಮುಜಿಬುರ್ ರೆಹಮಾನ್ ಅವರ ‘ರಾಷ್ಟ್ರಪಿತ’ ಪಟ್ಟವನ್ನೂ ತೆಗೆದು ಹಾಕಬೇಕು, ಸಂವಿಧಾನೇತರ ಕ್ರಮಗಳ ಮೂಲಕ ಸರ್ಕಾರ ಬದಲಾವಣೆ ಯತ್ನಗಳಿಗೆ ಗಲ್ಲು ಶಿಕ್ಷೆ ನೀಡಬೇಕು, ಅನಿವಾರ್ಯ ಸಂದರ್ಭದಲ್ಲಿ ಮಧ್ಯಂತರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವ ಅಂಶಗಳನ್ನು ಸಂವಿಧಾನದಲ್ಲಿ ಮರಳಿ ಸೇರಿಸಬೇಕು ಎಂದು ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಸರ್ಕಾರದ ಇಂಥ ಪ್ರಯತ್ನಗಳ ಬೆನ್ನಲ್ಲೇ ‘ಮೊಹಮ್ಮದ್ ಯೂನಸ್ ಸರ್ಕಾರ ಇದಕ್ಕೆ ಒಪ್ಪಿ ಬಾಂಗ್ಲಾವನ್ನು ಪಾಕ್‌ನಂತೆಯೇ ‘ಇಸ್ಲಾಮಿಕ್ ದೇಶ’ ಎಂದು ಘೋಷಿಸುವ ಸಾಧ್ಯತೆ ಇದೆ. ಏಕೆಂದರೆ ಬಾಂಗ್ಲಾದೇಶ ಈಗ ಜಮಾತ್ ಎ ಇಸ್ಲಾಮಿ ಸಂಘಟನೆಯ ಅಣತಿಯಂತೆ ನಡೆಯುತ್ತಿದೆ’ ಎನ್ನಲಾಗಿದೆ.
ಹಸೀನಾ ಸರ್ಕಾರದಲ್ಲಿ ಸೇರ್ಪಡೆ:
ಹಿಂದಿನ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಸಂವಿಧಾನಕ್ಕೆ ಕೆಲವು ತಿದ್ದುಪಡಿಗಳನ್ನು ತಂದು ಜಾತ್ಯತೀತ, ಸಮಾಜವಾದ ಅಂಶಗಳನ್ನು ಸಂವಿಧಾನದ ಮೂಲತತ್ವಗಳಾಗಿ ಸೇರಿಸಿತ್ತು. ಮಧ್ಯಂತರ ಸರ್ಕಾರ ರಚನೆ ಅವಕಾಶ ರದ್ದುಪಡಿಸಿತ್ತು. ಜೊತೆಗೆ ಮುಜಿಬುರ್ ರೆಹಮಾನ್ ಅವರ ‘ರಾಷ್ಟ್ರಪಿತ’ ಪಟ್ಟ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಇದೀಗ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಪರವಾಗಿ ಹೇಳಿಕೆ ನೀಡಿರುವ ಅಟಾರ್ನಿ ಜನರಲ್ ಮೊಹಮ್ಮದ್ ಅಸಝಮಾನ್, ‘ದೇಶದ ಶೇ.90ರಷ್ಟು ಜನಸಂಖ್ಯೆ ಮುಸ್ಲಿಮರಿಂದ ತುಂಬಿದೆ. ಹೀಗಾಗಿ ಜಾತ್ಯತೀತ ಎಂಬ ಪದ ನಿರರ್ಥಕ. ಹೀಗಾಗಿ ಸಂವಿಧಾನಕ್ಕೆ ಕೆಲ ಬದಲಾವಣೆಗಳನ್ನು ಮಾಡಿದರೆ, ದೇಶದ ಪ್ರಜಾಪ್ರಭುತ್ವ ಮತ್ತು ಐತಿಹಾಸಿಕ ನೀತಿಗಳು ಸಂವಿಧಾನಕ್ಕೆ ಸರಿಹೊಂದುತ್ತವೆ’ ಎಂದು ವಾದ ಮಂಡಿಸಿದ್ದಾರೆ.