ಶ್ರೀನಗರ: 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶಿಸಿದರು.
ಈ ಬಾರಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ವಸ್ತು ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶವಾಗಿದೆ.
3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಮೋದಿ ಅವರು, ಶ್ರೀನಗರದ ದಾಲ್ ಸರೋವರದ ತೀರದಲ್ಲಿನ ಶೇರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಯೋಗ ಪ್ರದರ್ಶನ ನೀಡಿದರು. ಇದರೊಂದಿಗೆ ಸರಿಸುಮಾರು 7 ಸಾವಿರ ಮಂದಿ ಪಾಲ್ಗೊಂಡು ವಿಶ್ವಕ್ಕೆ ಆರೋಗ್ಯ ಜಾಗೃತಿಯ ಸಂದೇಶ ಸಾರಿದರು.