ಕಲಬುರಗಿ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆಪ್ತ ನಾಗರಾಜ್ ಇರುವ ಕಲಬುರಗಿ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಭೇಟಿ ಪರಿಶೀಲಿಸಿದ್ದಾರೆ.
ಹೌದು, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿದ್ದ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಕೊಲೆ ಆರೋಪಿ ನಟ ದರ್ಶನ್ ಆಪ್ತ ಸಹಾಯಕ ನಾಗರಾಜನನ್ನು ಕಲಬುರಗಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಕಲಬುರಗಿ ಕಾರಾಗೃಹದಲ್ಲಿಯೂ ಅದೇ ಮಾದರಿಯಲ್ಲಿ ಕೈದಿಗಳಿಗೆ ಸಕಲ ಸೌಲಭ್ಯಗಳು ದೊರಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ನಗರದಲ್ಲಿರುವ ಕೇಂದ್ರ ಕಾರಾಗೃಹದ ಕೈದಿಗಳ ಹೈ-ಫೈ ಜೀವನದ ಹಲವು ಫೋಟೋಗಳು ಹಾಗೂ ವಿಡಿಯೋ ವೈರಲ್ ಆಗಿದ್ದು, ಜೈಲಲ್ಲಿ ಹಣ ಕೊಟ್ಟರೆ ಸ್ಮಾರ್ಟ್ ಫೋನ್, ಗಾಂಜಾ, ಮದ್ಯ ಸೇರಿ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಸಂಗತಿಯನ್ನು ಸಾರಿ ಹೇಳುತ್ತಿವೆ.
ಬೇರೆ, ಬೇರೆ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಆರೋಪಿಗಳಾದ ವಿಶಾಲ, ಸಾಗರ ಹಾಗೂ ಸೋನು ಎಂಬ ಕೈದಿಗಳು ಜೈಲಿನ ಒಳಗಡೆ ರಾಜ್ಯಾತಿಥ್ಯ ಅನುಭವಿಸುತ್ತಿರುವುದು ಅನಾವರಣವಾಗಿದೆ. ಈ ಮೂವರೂ ಸ್ಮಾರ್ಟ್ ಫೋನ್ ಬಳಸಿ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಗಾಂಜಾ ಹೊಡೆಯುತ್ತ ಸೆಲ್ಫಿಗೆ ಪೋಸ್ ನೀಡಿದ್ದಾರೆ. ದರ್ಶನ್ ಆಪ್ತ ನಾಗರಾಜ್‍ಗೂ ಜೈಲಲ್ಲಿ ಎಲ್ಲ ವ್ಯವಸ್ಥೆಗಳು ಆಗಿವೆಯಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ, ಜಿಲ್ಲಾಧಿಕಾರಿಯವರು ಕಲಬುರಗಿ ಜೈಲಿನಲ್ಲಿ ರಾಜಾತಿಥ್ಯ ಇರುವುದನ್ನು ಅಲ್ಲಗಳೆದಿದ್ದಾರೆ.
ಸರ್ಕಾರದ ಸೂಚನೆಗೆ ಬೆಲೆಯಿಲ್ಲ:
ಪರಪ್ಪನ ಅಗ್ರಹಾರದ ರಾಜಾತಿಥ್ಯ ಪ್ರಕರಣದ ಬಳಿಕ ರಾಜ್ಯ ಸರ್ಕಾರ ರಾಜ್ಯಾದ್ಯಂತ ಎಲ್ಲ ಕಾರಾಗೃಹಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದ ಬಂದೀಖಾನೆ ಇಲಾಖೆಗೆ ಕಲಬುರಗಿಯ ಬೆಳವಣಿಗೆ ಮುಜುಗರ ತಂದಿದ್ದು, ಪ್ರಕರಣ ನಿಭಾಯಿಸುವುದು ಸವಾಲಾಗಿದೆ.
ಅಧಿಕಾರಿಗಳ ಸಭೆ:
ಕಾರಾಗೃಹದಲ್ಲಿ ನಿಷಿದ್ಧ ಪದಾರ್ಥಗಳು ಕೈದಿಗಳಿಗೆ ಹೇಗೆ ದೊರಕುತ್ತಿವೆ ಎಂಬ ಬಗ್ಗೆಯೂ ಸಿಬ್ಬಂದಿ, ಜೈಲಿನ ಅಧಿಕಾರಿಗಳೊಂದಿಗೆ ಎಡಿಜಿಪಿ ಮಾಲಿನಿ ಅವರು ಕೂಲಂಕುಷ ಚರ್ಚೆ ನಡೆಸಿದ್ದಾರೆ. ಕಾರಾಗೃಹದಲ್ಲಿ ಭದ್ರತೆ ಸೇರಿದಂತೆ ಮಹತ್ವದ ವಿಭಾಗಗಳ ಮುಖ್ಯಸ್ಥರೊಂದಿಗೂ ಅವರ ಕೆಲಸದ ಕ್ರಮಗಳ ಮಾಹಿತಿ ಪಡೆದಿದ್ದು, ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಕಾರ್ಯಾಚರಣೆ ಸೇರಿದಂತೆ ಹಲವು ವಿಷಯಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.