ಗಾಂಧಿನಗರ: ಗುಜರಾತ್‌ನ ಪೋರಬಂದರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಸಹಾಯಕ್ಕಾಗಿ ತೆರಳಿದ್ದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸಮುದ್ರದಲ್ಲಿ ಮುಳುಗಿದ್ದು, ಅದರಲ್ಲಿದ್ದ ಪೈಲಟ್‌ಗಳು ಮತ್ತು ಡೈವರ್ ಸೇರಿ ಮೂವರು ನಾಪತ್ತೆಯಾಗಿದ್ದಾರೆ.
ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿದ್ದ ವೇಳೆ ತುರ್ತು ಭೂಸ್ಪರ್ಶದ ವೇಳೆ ಮುಳುಗಿದೆ. ಈ ಹೆಲಿಕಾಪ್ಟರ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಓರ್ವ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಕೋಸ್ಟ್ ಗಾರ್ಡ್‍ನ ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳ ಮೂಲಕ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅರಬ್ಬಿ ಸಮುದ್ರದಲ್ಲಿ ಹೆಲಿಕಾಪ್ಟರ್ ಅವಶೇಷಗಳೂ ಪತ್ತೆಯಾಗಿದ್ದು, ಸಿಬ್ಬಂದಿಯ ಬಗ್ಗೆ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ. ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಸಿಲುಕಿರುವ ಹಡಗಿನಿಂದ ಸಹಾಯಕ್ಕಾಗಿ ಸಂದೇಶ ಕಳುಹಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ಹಡಗಿನಿಂದ ಜನರನ್ನು ಸ್ಥಳಾಂತರಿಸಬೇಕಾಗಿತ್ತು ಮತ್ತು ಈ ವೇಳೆ ಹೆಲಿಕಾಪ್ಟರ್ ಅಲ್ಲಿಗೆ ತಲುಪಿದಾಗ, ಪತನವಾಗಿದೆ ಎನ್ನಲಾಗಿದೆ.