Heavy rain : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು, ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುಂದುವರೆದಿದ್ದು, ವಿಶೇಷವಾಗಿ ಬೆಂಗಳೂರಿನಲ್ಲಿ ವರುಣನ ಅಬ್ಬರಕ್ಕೆ ಜನರು ಹೈರಾಣಗಿದ್ದು, ಮುಂದಿನ ಮೂರು ದಿನದಲ್ಲಿ ಬೆಂಗಳೂರು ಹಾಗೂ ಗ್ರಾಮಾಂತರ ಸ್ಥಳಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಷ್ಟೇ ಅಲ್ಲ, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ನಾಲ್ಕು ಜಿಲ್ಲೆಗಳು, ಬೆಂಗಳೂರು ಸೇರಿ ಒಟ್ಟು 17 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ರಾತ್ರಿಯೂ ವರುಣನ ಆರ್ಭಟ
ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ನಿನ್ನೆ ರಾತ್ರಿಯೂ ಧಾರಾಕಾರ ಮಳೆ ಸುರಿದಿದ್ದು, ದೇವನಹಳ್ಳಿ ಸುತ್ತಮುತ್ತ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಇಡೀ ರಾತ್ರಿ ಜಾಗರಣೆ ಮಾಡಬೇಕಾಯಿತು.
ಇನ್ನು, ಕೊಡಿಗೆಹಳ್ಳಿ ಅಂಡರ್ಪಾಸ್ನಲ್ಲಿ ನೀರು ತುಂಬಿ ವಾಹನಗಳು ಸಿಲುಕಿಕೊಂಡಿದ್ದು, ಕೊಡಿಗೆಹಳ್ಳಿ ತಿಂಡ್ಲು ಮುಖ್ಯರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನೀರಿನಿಂದ ಆವರಿಸಿತ್ತು. ಅಷ್ಟೇ ಅಲ್ಲ, ಉನ್ನಿಕೃಷ್ಣನ್ ಜಂಕ್ಷನ್ & TVS ಕ್ರಾಸ್ ಜಂಕ್ಷನ್ ಹತ್ತಿರ ಮರ ಬಿದ್ದ ಬಿದ್ದು ಟ್ರಾಫಿಕ್ ಜಾಮ್ ಉಂಟಾಗಿತ್ತು.