ಓಟ್ಸ್ ಎಂಬುದು ಅತ್ಯಂತ ಹಳೆಯ ದವಸ ಧಾನ್ಯಗಳ ಪೈಕಿ ಒಂದು. ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಮೈಕ್ರೋ ಹಾಗೂ ಮ್ಯಾಕ್ರೋ ಪೋಷಕಾಂಶಗಳಿವೆ. ಇವುಗಳಲ್ಲಿ ಪ್ರೊಟೀನ್ ಹೆಚ್ಚಿದ್ದು, ಇತರ ಧಾನ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶವೂ, ಪೋಷಕಾಂಶಗಳೂ ಇರುತ್ತವೆ. ಪೋಷಕಾಂಶ ತಜ್ಞರ ಪ್ರಕಾರ, ಓಟ್ಸ್‌ನಲ್ಲಿ ಸಾಕಷ್ಟು ಕರಗಬಲ್ಲ ನಾರಿನಂಶವಿರುವುದರಿಂದ ಇದು ಕೊಲೆಸ್ಟೆರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ.
ಅಷ್ಟೇ ಅಲ್ಲ, ದೇಹಕ್ಕೆ ಗ್ಲುಕೋಸ್ ಬೇಗನೆ ಸೇರದಂತೆಯೂ ಇವು ಮಾಡುತ್ತದೆ. ಕರುಳಿನಲ್ಲಿ ಆಹಾರ ಸುಲಭವಾಗಿ ಪ್ರವಹಿಸಲು ಕೂಡಾ ಇದು ನೆರವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಓಟ್ಸ್ ಸೇವನೆಯಿಂದ ನಿಜವಾಗಿಯೂ ತೂಕ ಇಳಿಕೆಗೆ ಸಹಕಾರಿ. ಓಟ್ಸ್‌ನಲ್ಲಿ ಸಾಕಷ್ಟು ಪೋಷಕಾಂಶಗಳೂ, ನಾರಿನಂಶವೂ ಇರುವುದರಿಂದ ಇದರಿಂದ ತೂಕ ಇಳಿಯಬಹುದು ಎಂಬುದು ನಿಜವೇ ಆದರೂ, ಸರಿಯಾಗಿ ಹಿತಮಿತವಾಗಿ ಸೇವನೆ ಮಾಡಿದರೆ ಮಾತ್ರ ಇದು ಸಾಧಯ ಎಂಬುದೂ ಸತ್ಯವೇ.
ಯಾಕೆಂದರೆ ಓಟ್ಸ್‌ನಲ್ಲಿ ಸ್ಟಾರ್ಚ್ ಕೂಡಾ ಇರುವುದರಿಂದ ಹಾಗೂ ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಕಾರಣದಿಂದ ಹೆಚ್ಚು ಗ್ಲಿಸೆಮಿಕ್ ಇಂಡೆಕ್ಸ್ ಹೊಂದಿರುತ್ತದೆ. ಹಾಗಾಗಿ ದೇಹದಲ್ಲಿ ಸಕ್ಕರೆಯ ಪ್ರಮಾಣ ಏರುವ ಅಪಾಯವೂ ಇದೆ. ಹಿತಮಿತವಾಗಿ ಸೇವಿಸಿದರೆ ಮಾತ್ರ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ. ಓಟ್ಸ್‌ನನ್ನು ನಾವು ಹೇಗೆ ಬಳಸುತ್ತೇವೆ ಎಂಬುದರಲ್ಲಿ ಸತ್ಯ ಅಡಗಿದೆ ಎನ್ನುತ್ತಾರೆ ತಜ್ಞರು. ಯಾಕೆಂದರೆ ಓಟ್ಸ್‌ನಿಂದ ಲಾಭ ಇರುವಷ್ಟೇ ಅಪಾಯವೂ ಇದೆ. ಮಾರುಕಟ್ಟೆಯಲ್ಲಿ ಈಗ ಸುಲಭವಾಗಿ ಬಗೆಬಗೆಯ ಫ್ಲೇವರ್‌ಗಳ ಮಸಾಲೆಗಳ ಜೊತೆಗೆ ಲಭ್ಯವಾಗುವ ಇನ್‌ಸ್ಟ್ಯಾಂಟ್- ದಿಢೀರ್ ಓಟ್ಸ್‌ಗಳಲ್ಲಿ ಗ್ಲಿಸೆಮಿಕ್ ಇಂಡೆಕ್ಸ್ ಹೆಚ್ಚಿರುತ್ತದೆ. ಹಣ್ಣುಗಳನ್ನು ಸೇರಿಸಿ, ಇನ್‌ಸ್ಟ್ಯಾಂಟ್ ಓಟ್ಸ್ ಮಾಡಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ದಿಢೀರ್ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಹಾಗಾದರೆ, ತೂಕ ಇಳಿಸುವ ಉದ್ದೇಶದಿಂದ ಓಟ್ಸ್ ತಿನ್ನಲು ಬಯಸುವ ಮಂದಿ ಯಾವ ಕ್ರಮದಲ್ಲಿ ತಿಂದರೆ ಲಾಭ ಪಡೆಯಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಉತ್ತರ ಇಲ್ಲಿದೆ. ಇನ್‌ಸ್ಟ್ಯಾಂಟ್‌ಗಳ ಬದಲಾಗಿ ಸ್ಟೀಲ್ ಕಟ್ ಓಟ್ಸ್‌ಗಳ ಬಳಕೆ ಮಾಡುವುದು ಒಳ್ಳೆಯದು. ಇದು ನಿಧಾನವಾಗಿ ಶಕ್ತಿ ನೀಡುತ್ತದೆ. ಹಾಗೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಓಟ್ಸ್ ಒಳ್ಳೆಯದೆಂದು ಅಂದುಕೊಂಡು ಅತಿಯಾಗಿ ಓಟ್ಸನ್ನೇ ನಿತ್ಯವೂ ತಿನ್ನುವುದೂ ಕೂಡಾ ಒಳ್ಳೆಯದಲ್ಲ. ಹಿತಮಿತವಾಗಿ ತಿಂದರೆ ಮಾತ್ರ ಅವುಗಳ ನಿಜವಾದ ಪ್ರಯೋಜನ ಪಡೆಯಲು ಸಾಧ್ಯವಾಗಬಹುದು.