ಮಾವಿನಹಣ್ಣಿನ ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರೂರುತ್ತದೆ. ಮಾರುಕಟ್ಟೆಯಲ್ಲಿ ಮಾವು ಮಾರಾಟ ಆರಂಭವಾಗಿದ್ದು, ಮಾವು ಪ್ರಿಯರು ಈ ಸೀಸನ್ಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಯಾಕೆಂದರೆ ಮಾವು ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
ಬೇಸಗೆ ಸಮಯದಲ್ಲಿ ಯಥೇಚ್ಛವಾಗಿ ಸಿಗುವಂತಹ ಮಾವಿನ ಹಣ್ಣು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಹೀಗಾಗಿ ಇದನ್ನು ಹಣ್ಣುಗಳ ರಾಜನೆಂದು ಕರೆಯಲಾಗುತ್ತದೆ. ಹಣ್ಣಿನ ರುಚಿಯು ಅದ್ಭುತವಾಗಿರಲಿದ್ದು, ಒಂದೊಂದು ಜಾತಿಯ ಮಾವಿನ ಹಣ್ಣು ಬೇರೆ ಬೇರೆ ರೀತಿಯ ರುಚಿ ಹೊಂದಿರುತ್ತವೆ. ಈ ಹಣ್ಣು ಹಳದಿ, ಕೆಂಪು, ಕಿತ್ತಳೆ ಹಾಗೂ ಹಸಿರು ಬಣ್ಣದಲ್ಲಿ ಸಿಗುತ್ತವೆ.
ಮಾವಿನ ಹಣ್ಣು ಹಲವು ಪೋಷಕಾಂಶಂಗಳನ್ನು ಕೂಡ ಹೊಂದಿದೆ. ಮುಖ್ಯವಾಗಿ ಅನೇಕ ವಿಟಮಿನ್ಗಳನ್ನು ಇದರಲ್ಲಿ ಪಡೆಯಬಹುದು. ಈ ಹಣ್ಣಿನಲ್ಲಿ ವಿಟಮಿನ್ಸ್ಗಳಾದ ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಕೆ ಹಾಗೂ ವಿಟಮಿನ್ ಎ ಅಂಶ ಯಥೇಚ್ಛವಾಗಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ, ಈ ಹಣ್ಣಿನಲ್ಲಿ ಪೌಷ್ಟಿಕ ಸತ್ವಗಳು ಒಳಗೊಂಡಿರುವ ಹಲವಾರು ಬಗೆಯ ಖನಿಜಾಂಶಗಳು ಕೂಡ ಇದೆ.
ಹಳದಿ ಬಣ್ಣದ ಹಣ್ಣುಗಳನ್ನು ನೋಡಿದ ಕೂಡಲೇ ಅದರಲ್ಲಿ ವಿಟಮಿನ್ ಎ ಅಂಶವಿರುತ್ತದೆ ಎಂದು ಹೇಳಬಹುದು. ಮಾವು ಅತ್ಯುತ್ತಮ ವಿಟಮಿನ್ ಎ ಅಂಶವನ್ನು ಹೊಂದಿರುವುದರಿಂದ ದೃಷ್ಟಿಯ ಆರೋಗ್ಯ ಕಾಪಾಡುವಲ್ಲಿ ಬಹಳ ಪ್ರಯೋಜನಕಾರಿ. ಮಾವಿನಲ್ಲಿ ಸಕ್ಕರೆ ಅಂಶ ಜಾಸ್ತಿಯಿರುವುದರಿಂದ ಹಣ್ಣು ತಿನ್ನಲು ಬಹಳ ರುಚಿ. 17 ಗ್ರಾಂನಷ್ಟು ಗ್ಲೂಕೋಸ್ ಅಂಶ ಹೊಂದಿರುತ್ತದೆ. ಆದ್ದರಿಂದ ಮಧುಮೇಹಿಗಳಿಗೆ ಹಾಗೂ ತೂಕ ಕಡಿಮೆ ಮಾಡಲಿರುವ ಮತ್ತು ಪಥ್ಯ ಇರುವವರಿಗೆ ಈ ಹಣ್ಣು ನಿಷಿದ್ಧ.
ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಹಾಗೂ ಫಾಸ್ಫರಸ್ ಅಂಶಗಳೂ ಕೂಡ ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ.
ಇದರಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ವಿಟಮಿನ್ ಕೆ ಮತ್ತು ವಿಟಮಿನ್ ಇ ಅಂಶಗಳು ಚರ್ಮದ ಕಾಂತಿ ಹೆಚ್ಚಿಸುತ್ತವೆ. ನಿಯಾಸಿನ್ ಅಂಶ ಸಾಕಷ್ಟು ದೊರಕುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ.
ಮಾವಿನ ಹಣ್ಣಾಗುವ ಸಮಯಕ್ಕಿಂತಲೂ ಹಣ್ಣಾದ ಬಳಿಕ ವಿಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ. ಮಾವಿನ ಹಣ್ಣಿನಲ್ಲಿ ಪ್ರೊವಿಟಮಿನ್ ಎ ಕ್ಯಾರೊಟಿನಾಯ್ಡ್ಗಳಾದ ಆಲ್ಫಾ-ಕ್ಯಾರೋಟಿನ್ ಮತ್ತು ಬೀಟಾ-ಕ್ಯಾರೋಟಿನ್ ಇರುತ್ತದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಇ ಮತ್ತು ಕೆ ಅಂಶವು ಕಡಿಮೆ ಅಥವಾ ಮಧ್ಯಮವಾಗಿರುತ್ತದೆ, ಆದರೆ ಈ ಹಣ್ಣಿನಲ್ಲಿ ವಿಟಮಿನ್ ಡಿ ಇರುವುದಿಲ್ಲ. ಆದರೆ, ಹಣ್ಣಿನಲ್ಲಿರುವ B ಜೀವಸತ್ವಗಳಲ್ಲಿ B1 (ಥಯಾಮಿನ್), B2 (ರಿಬೋಫ್ಲಾವಿನ್), B3 (ನಿಯಾಸಿನ್), B5 (ಪಾಂಟೊಥೆನಿಕ್ ಆಮ್ಲ), B6 (ಪಿರಿಡಾಕ್ಸಿನ್, ಪಿರಿಡಾಕ್ಸಲ್ ಮತ್ತು ಪಿರಿಡಾಕ್ಸಮೈನ್), ಮತ್ತು B9 (ಫೋಲೇಟ್ ಅಥವಾ ಫೋಲಿಕ್ ಆಮ್ಲ) ಸೇರಿರುತ್ತವೆ.
ಮಾವಿನಹಣ್ಣನ್ನು ಸಮತೋಲಿತ ಆಹಾರದಲ್ಲಿ ಸೇರಿಸುವುದರಿಂದ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಆದಾಗ್ಯೂ, ಮಧುಮೇಹಿಗಳು ಹಾಗೂ ತೂಕ ಕಡಿಮೆ ಮಾಡುವವರು ನಿಯಮಿತವಾಗಿ ಸೇವನೆ ಮಾಡುವುದು ಅತ್ಯಗತ್ಯ.