ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ರಾತ್ರಿ ಹಾಕಿಟ್ಟು ಬೆಳಗ್ಗೆ ಎದ್ದ ಮೇಲೆ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಬೆಂಡೆಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಹೀಗೆ ಮಾಡುವ ಮೂಲಕ ನಿತ್ಯವೂ ಬೆಂಡೆಕಾಯಿಯ ಪೋಷಕಾಂಶಗಳನ್ನು ದೇಹಕ್ಕೆ ಲಭಿಸುವಂತೆ ಮಾಡಬಹುದು. ಬೆಂಡೆಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ.
ಇವು ಫ್ರೀ ರ್ಯಾಡಿಕಲ್ಸ್‌ಗಳನ್ನು ಕಡಿಮೆ ಮಾಡಿ, ಆಕ್ಸಿಡೇಟಿವ್ ಒತ್ತಡವನ್ನೂ ಇಳಿಸುವ ಜೊತೆಗೆ ಅಂಗಾಂಶ ಮಟ್ಟದಲ್ಲಿ ಹಾನಿಯಾಗುವುದನ್ನು ತಪ್ಪಿಸುತ್ತದೆ. ಇದರಿಂದ ಕ್ಯಾನ್ಸರ್, ಹೃದಯದ ಕಾಯಿಲೆ ಸೇರಿದಂತೆ ಮಾರಣಾಂತಿಕ ಕಾಯಿಲೆಗಳು ಕಡಿಮೆಯಾಗುತ್ತದೆ. ಬೆಂಡೆಕಾಯಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಸಕ್ಕರೆಯ ಹೀರಿಕೆಯನ್ನು ಇದು ತಡೆಯುತ್ತದೆ. ಪರಿಣಾಮವಾಗಿ ಮಧುಮೇಹದಂತಹ ಕಾಯಿಲೆ ಹತೋಟಿಗೆ ಬರುತ್ತದೆ. ಜೀರ್ಣಾಂಗವ್ಯೂಹ ವ್ಯವಸ್ಥೆಗೆ ಬೆಂಡೆಕಾಯಿ ಒಳ್ಳೆಯದು. ಜೀರ್ಣಾಂಗನಾಳಗಳನ್ನು ಇದು ಸರಿಯಾಗಿಡುವ ಜೊತೆಗೆ, ಸಹಜವಾಗಿ ಜೀರ್ಣಕ್ರಿಯೆ ಆಗುವಲ್ಲಿ ಸಹಾಯ ಮಾಡುತ್ತದೆ. ಬೆಂಡೆಕಾಯಿಯಲ್ಲಿರುವ ನಾರಿನಂಶ ಕೊಲೆಸ್ಟೆರಾಲ್ ಅನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಕೊಲೆಸ್ಟೆರಾಲ್ ಕಡಿಮೆಯಾಗುವ ಮೂಲಕ ಸಹಜವಾಗಿಯೇ ಹೃದಯಕ್ಕೆ ಬೆಂಡೆಕಾಯಿ ಒಳ್ಳೆಯದನ್ನೇ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ ಬೆಂಡೆಕಾಯಿ ಬಹಳ ಒಳ್ಳೆಯದು. ಚರ್ಮಕ್ಕೆ ಬೇಕಾದ ನೀರಿನಂಶವನ್ನು ಇದು ನೀಡುವ ಮೂಲಕ ಸದಾ ಚರ್ಮವನ್ನು ನಯವಾಗಿ ಆರೋಗ್ಯವಾಗಿ ಇರಿಸುತ್ತದೆ. ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಎ ಧಾರಾಳವಾಗಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊರಗಿನಿಂದ ದಾಳಿ ಮಾಡುವುದರ ವಿರುದ್ಧ ಪ್ರತಿದಾಳಿ ನಡೆಸಿ ದೇಹವನ್ನು ರೋಗ ಬರದಂತೆ ಕಾಪಾಡುತ್ತದೆ. ಬೆಂಡೆಕಾಯಿಯಲ್ಲಿ ವಿಟಮಿನ್ ಕೆ ಹಾಗೂ ಕ್ಯಾಲ್ಸಿಯಂ ಇರುವುದರಿಂದ ಎಲುಬಿನ ಆರೋಗ್ಯಕ್ಕೆ ಇದು ಒಳ್ಳೆಯದನ್ನೇ ಮಾಡುತ್ತದೆ. ಎಲುಬಿನ ಸವೆತವಾಗದಂತೆ ತಡೆಯುತ್ತದೆ. ಹಾಗೂ ಎಲುಬಿನ ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿರುವ ಅನುಭವವಾಗಿ, ಅನಗತ್ಯ ತಿನ್ನುವ ಚಟ ಕಡಿಮೆಯಾಗುತ್ತದೆ. ಆ ಮೂಲಕ ತೂಕ ಇಳಿಯುತ್ತದೆ. ಬೆಂಡೆಕಾಯಿಯಲ್ಲಿ ವಿಟಮಿನ್ ಎ ಗೂ ಬೀಟಾ ಕೆರಟಿನ್ ಇರುವುದರಿಂದ ಇದು ಕಣ್ಣಿನ ಆರೋಗ್ಯವನ್ನು ಚೆನ್ನಾಗಿಡುವಲ್ಲಿ ಸಹಾಯ ಮಾಡುತ್ತದೆ. ಕಣ್ಣಿನ ಸಮಸ್ಯೆಗಳು ಬರದಂತೆ ತಡೆಯುತ್ತದೆ.