ಕಿತ್ತಳೆ ಹಣ್ಣು ಹುಳಿಯನ್ನೂ ಸಿಹಿಯನ್ನೂ ಸಮಪ್ರಮಾಣದಲ್ಲಿ ಹೊಂದಿರುವ ದೇಹಕ್ಕೆ ಒಳ್ಳೆಯದನ್ನೇ ಬಯಸುವ ಹಣ್ಣು. ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆಯ ಪುಡಿಯಲ್ಲಿ ನಮ್ಮ ದೇಹಕ್ಕೆ ನಿತ್ಯವೂ ಬೇಕಾಗುವ ವಿಟಮಿನ್ ಸಿಯ ಶೇ.14ರಷ್ಟಿದೆಯಂತೆ. ಅಂದರೆ ಅದು ಒಳಗಿರುವ ಕಿತ್ತಳೆ ಹಣ್ಣಿನ ಮೂರು ಪಟ್ಟು ಹೆಚ್ಚು.
ಕಿತ್ತಳೆ ಸಿಪ್ಪೆಯಲ್ಲಿ ಒಳಗಿನ ಹಣ್ಣಿಗಿಂತ ನಾಲ್ಕು ಪಟ್ಟು ಹೆಚ್ಚು ನಾರಿನಂಶವಿದೆಯಂತೆ. ಫ್ಲಾರಿಡಾ ವಿಶ್ವವಿದ್ಯಾಲಯವು ಕಿತ್ತಳೆ ಸಿಪ್ಪೆಯ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ನಮ್ಮ ದೇಹದಲ್ಲಿರುವ ಕೆಲವೊಂದು ಬ್ಯಾಕ್ಟೀರಿಯಾಗಳು ಹೃದಯದ ಕಾಯಿಲೆಯನ್ನು ಉಲ್ಬಣಗೊಳಿಸುವ ತಾಕತ್ತನ್ನು ಹೊಂದಿದೆಯಂತೆ. ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಶಕ್ತಿ ಈ ಕಿತ್ತಳೆ ಸಿಪ್ಪೆಯಲ್ಲಿದೆಯಂತೆ. ಕಿತ್ತಳೆ ಸಿಪ್ಪೆಯಲ್ಲಿರುವ ಫೈಟೋ ಕೆಮಿಕಲ್‌ಗಳು ಹೃದಯದ ಕಾಯಿಲೆಗೆ ಪೂರಕವಾದ ಟ್ರೈಮೀಥೈಲಾಮೈನ್ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಹೃದಯಸ್ನೇಹಿಯಾಗಿ ವರ್ತಿಸುತ್ತದೆ.
ಕಿತ್ತಳೆಯ ಸಿಪ್ಪೆಯಲ್ಲಿ ಅದನ್ನು ಬೆಳೆಸುವ ಸಂದರ್ಭ ಸಿಂಪಡಿಸಿದ ರಾಜಾಯನಿಕಗಳೂ, ಕೀಟನಾಶಕಗಳೂ ಇರುವ ಸಂಭವ ಹೆಚ್ಚು. ಹೀಗಾಗಿ ಅದನ್ನು ಸರಿಯಾಘಿ, ಸರಿಯಾದ ಕ್ರಮದಲ್ಲಿ ತೊಳೆದುಕೊಂಡು ಕೆಲವು ಆಹಾರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು. ಕಿತ್ತಳೆ ಸಿಪ್ಪೆಯನ್ನು ಸಕ್ಕರೆ ಪಾಕದಲ್ಲಿ ಹಾಕಿ ಮಕ್ಕಳಿಗಾಗಿ ಸಿಹಿ ಕ್ಯಾಂಡಿಗಳನ್ನು ಮಾಡಬಹುದು. ಸಿಪ್ಪೆಯನ್ನು 15 ನಿಮಿಷ ನೀರಿನಲ್ಲಿ ಹಾಕಿಟ್ಟು ನಂತರ ಚೆನ್ನಾಗಿ ತೊಳೆದು, ಅದನ್ನು ನೀರಿನಲ್ಲಿ ೧೫ ನಿಮಿಷ ಕುದಿಸಿ, ಸಿಪ್ಪೆಯನ್ನು ಸಕ್ಕರೆ ಪಾಕಕ್ಕೆ ಹಾಕಿ ಒಣಗಿಸುವ ಮೂಲಕ ಒಳ್ಳೆಯ ನೈಸರ್ಗಿಕ ಕ್ಯಾಂಡಿ ಮಾಡಬಹುದು. ಕಿತ್ತಳೆ ಕೇಕ್‌ಗಳನ್ನು ಮಾಡುವಾಗ ಕಿತ್ತಳೆಯ ಸಿಪ್ಪೆಯನ್ನು ತುರಿದು ಒಂದೆರಡು ಚಮಚದಷ್ಟು ಪೇಸ್ಟ್ ತಯಾರಿಸಿ ಹಾಕಿದರೆ, ಯಾವುದೇ ಕೃತಕ ಘಮದ ಅವಶ್ಯಕತೆಯೇ ಇಲ್ಲ. ಕಿತ್ತಳೆ ಸಿಪ್ಪೆಯ ಚಹಾ ಮಾಡಿ ಕುಡಿಯಬಹುದು. ನಿತ್ಯವೂ ಅಲ್ಲದಿದ್ದರೂ, ಯಾವಾಗಲಾದರೊಮ್ಮೆ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು. ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ, ನೀವು ಮನೆಯಲ್ಲೇ ಮಾಡುವ ಫೇಸ್‌ಪ್ಯಾಕ್‌ಗಳಿಗೆ ಇವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಮುಖದ ಮೇಲಿನ ಕಲೆಗಳು, ಸುಕ್ಕು ನೆರಿಗೆಗಳಿಗೆ ಇದು ಬಹಳ ಒಳ್ಳೆಯದು. ಇದರ ನಿಯಮಿತ ಬಳಕೆಯಿಂದ ಮುಖ ತಾಜಾತನದಿಂದ ಹೊಳೆಯುತ್ತದೆ.