ಬೆಳಗ್ಗೆ ಎದ್ದ ಕೂಡಲೇ ಸಾಮಾನ್ಯವಾಗಿ ಒಂದು ಲೋಟ ಚಹಾ ಮಾಡಿಕೊಂಡು ಸೋಫಾದಲ್ಲಿ ಕೂತು ಪೇಪರು ಓದುತ್ತಲೋ, ಸುಮ್ಮನೆ ಬಾಲ್ಕನಿಯಲ್ಲಿ ಒಂದ್ಹತ್ತು ನಿಮಿಷ ಚಹಾ ಹಿಡಿದು ಕೂರುವ ಅಭ್ಯಾಸ ನಮ್ಮಲ್ಲಿ ಬಹುತೇಕರಿಗಿದೆ. ಬೆಳಗ್ಗೆ ಎದ್ದ ಕೂಡಲೇ ಚಹಾ ಬೇಕು, ಇಲ್ಲವಾದರೆ ಕಷ್ಟ ಎಂಬಂಥ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ.
ಸ್ಪೈಸೀ ಆಹಾರಗಳು
ಬೆಳಗ್ಗೆ ಎದ್ದ ಕೂಡಲೇ ಸ್ಪೈಸೀ ಆಹಾರದ ಸೇವನೆ ಒಳ್ಳೆಯದಲ್ಲ. ಬೆಳಗ್ಗೆ ಕಾಲಿ ಹೊಟ್ಟೆಗೆ ಉತ್ತಮ ಆರೋಗ್ಯಕರವಾದ, ದಿನವಿಡೀ ದೇಹ ಉಲ್ಲಾಸ ಪಡೆಯುವ ಆಹಾರ ನೀಡಬೇಕೇ ಹೊರತು ಬೆಳ್ಳಂಬೆಳಗ್ಗೆಯೇ ಆಲಸ್ಯತನವನ್ನು ಆವಾಹಿಸುವ ಆಹಾರವನ್ನು ತಿನ್ನಬಾರದು. ಬೆಳಗ್ಗೆ ಖಾಲಿ ಹೊಟ್ಟೆಗೆ ಸ್ಪೈಸೀಯಾದ ಮಸಾಲೆಯುಕ್ತ ಆಹಾರವನ್ನು ನೀಡಿದರೆ, ಹೊಟ್ಟೆಯ ಒಳಪದರಕ್ಕೆ ಕಿರಿಕಿರಿಯಾದ ಭಾವ ಉಂಟಾಗುತ್ತದೆ. ಹೀಗಾಗಿ, ದೇಹವನ್ನು ತಂಪಾಗಿಡುವ ಪೋಷಕಾಂಶಯುಕ್ತ, ಮಸಾಲೆಯಿಲ್ಲದ ಆಹಾರ ಸೇವಿಸಿ. ದೇಹಕ್ಕೆ ಹಿತವಾದ ಅನುಭವ ನೀಡುವ ಆಹಾರ ಒಳ್ಳೆಯದು.
ಸಿಹಿತಿನಿಸುಗಳು
ಬೆಳಗ್ಗೆ ಸಿಹಿತಿನಿಸು ತಿನ್ನುವ ಕ್ರಮ ಹಲವರ ಪದ್ಧತಿಯಲ್ಲಿದೆ. ಆದರೆ ಇದು ಒಳ್ಳೆಯದಲ್ಲ. ಇನ್ನೂ ಕೆಲವರು ಈಗ ಆಧುನಿಕ ಪಾಶ್ಚಾತ್ಯ ಶೈಲಿಯ ಅನುಕರಣೆಯಲ್ಲಿ ಪ್ಯಾನ್ ಕೇಕ್, ವ್ಯಾಫಲ್‌ಗಳನ್ನು ಸೇವಿಸುವ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ಬ್ರೆಡ್ ಮೇಲೆ ಒಂದಿಷ್ಟು ಜ್ಯಾಮ್, ಚಾಕೋಲೇಟ್ ಸಿರಪ್‌ಗಳನ್ನು ಸುರಿದು ತಿನ್ನಿಸುವುದೂ ಉಂಟು. ಆದರೆ ಈ ಅಭ್ಯಾಸಗಳಾವುದೂ ಹೊಟ್ಟೆಗೆ ಒಳ್ಳೆಯದಲ್ಲ ನೆನಪಿಡಿ. ಇದು ತೂಕ ಹೆಚ್ಚಿಸುವ ಜೊತೆಗೆ, ಪಿತ್ತಕೋಶದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತದೆ.
ತಂಪು ಪಾನೀಯಗಳು
ಬೆಳಗ್ಗೆ ಎದ್ದು ಹಲವರು ತಂಪು ಪಾನೀಯಗಳನ್ನೂ ಸೇವಿಸುವುದೂ ಇದೆ. ಐಸ್ಡ್ ಟೀ, ಹಣ್ಣಿನ ಜ್ಯೂಸ್‌ಗಳು, ಪ್ಯೇಕೇಜ್ಡ್ ಡ್ರಿಂಕ್‌ಗಳು ಇತ್ಯಾದಿಗಳನ್ನು ಬೆಳಗ್ಗಿನ ಹೊತ್ತು ಕುಡಿಯುತ್ತಾರೆ. ತಣ್ಣಗಿನ ಇಂತಹ ಡ್ರಿಂಕ್‌ಗಳನ್ನು ಬೆಳಗ್ಗೆ ಕುಡಿಯುವುದರಿಂದ ಇದ್ದಕ್ಕಿದ್ದ ಹಾಗೆ ಶಕ್ತಿ ಬಂದಂಥ ಅನುಭವವಾದರೂ, ಇವು ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತವೆ. ಅಷ್ಟೇ ಅಲ್ಲ, ಇದರಲ್ಲಿರುವ ಅಧಿಕ ಸಕ್ಕರೆಯೂ ದೇಹದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರುತ್ತದೆ.
ಸಿಟ್ರಸ್ ಹಣ್ಣುಗಳು
ಬೆಳಗ್ಗೆ ಎದ್ದ ಕೂಡಲೇ ಸಿಟ್ರಸ್ ಹಣ್ಣುಗಳನ್ನು ಸೇವಿಸುವ ಅಭ್ಯಾಸವಿದ್ದರೆ ಬಿಡಿ. ಇವು ದೇಹದಲ್ಲಿ ಆಸಿಡ್ ಮಟ್ಟವನ್ನು ಏರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನೂ ಕುಂಠಿತಗೊಳಿಸುವ ಸಾಧ್ಯತೆ ಹೆಚ್ಚು.
ಹಸಿ ತರಕಾರಿಗಳು
ಹಸಿ ತರಕಾರಿಗಳು ದೇಹಾರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಇವು ಕರಗಲು ಸ್ವಲ್ಪ ಹೆಚ್ಚೇ ಸಮಯ ಬೇಕು. ಅಷ್ಟೇ ಅಲ್ಲ, ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿರುವಾಗ, ಜೀರ್ಣಾಂಗಗಳಿಗೆ ಹೆಚ್ಚಿನ ಒತ್ತಡವನ್ನು ಕೊಟ್ಟು ಕೆಲಸವನ್ನು ಮಾಡಿಸುತ್ತವೆ. ಹಾಗಾಗಿ, ಜೀರ್ಣಕ್ರಿಯೆಗೆ ಹೆಚ್ಚು ಒತ್ತಡವಾಗದಂಥ ಆಹಾರವನ್ನು ಬೆಳಗ್ಗೆ ತಿನ್ನುವುದು ಒಳ್ಳೆಯದು.