ಬೆಳಗಾವಿ: ಯುವ ಸಂಸದೆ ಪ್ರಿಯಾಂಕಾ ಜಾರಿಕಿಹೊಳಿ ಅವರನ್ನು ಸನ್ಮಾನಿಸುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು, ಗ್ರಾಮ ಪಂಚಾಯಿತಿ ಕಚೇರಿ ಮೇಲೆ ಬಿಯರ್ ಬಾಟಲ್‌ನಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಎಸೆದಿರುವ ಘಟನೆ ಶುಕ್ರವಾರ ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಪ್ರಿಯಾಂಕಾ ತಾಲೂಕಿನ ಕಲಕಾಂಬ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಎರಡು ಬಣಗಳು ಸನ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದವು. ಆದರೆ, ಕಾರ್ಯಕ್ರಮ ಮುಗಿದ ತಕ್ಷಣ ಒಂದು ಬಣದ ಸನ್ಮಾನ ಸ್ವೀಕರಿಸಿ, ಸಂಸದೆ ಗ್ರಾಮದಿಂದ ತೆರಳಿದ್ದಾರೆ. ಇದರಿಂದ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಗಲಾಟೆಯಾಗಿದೆ. ಬಳಿಕ ಒಂದು ಗುಂಪು ರಾತ್ರಿ ಗ್ರಾಮ ಪಂಚಾಯಿತಿ ಕಚೇರಿ ಮೇಲೆ ದಾಳಿ ನಡೆಸಿದೆ.
ಕಿಡಿಗೇಡಿಗಳು ಬಿಯರ್ ಬಾಟಲ್‌ನಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮ ಪಂಚಾಯಿತಿ ಕಚೇರಿ ಆವರಣ ಮತ್ತು ಒಳಗಡೆ ಬಿಯರ್ ಬಾಟಲಿಗಳು ಪುಡಿಪುಡಿಯಾಗಿರುವುದು ಕಂಡುಬಂದಿದೆ. ಬೆಂಕಿ ಹಚ್ಚಿದ ಕಿಡಿಗೇಡಿಗಳು ಸಿಸಿಟೀವಿ ಕ್ಯಾಮೆರಾ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಡಿವಿಆರ್‌ನಲ್ಲಿ ದಾಳಿಯ ದೃಶ್ಯ ಸೆರೆಯಾಗಿದೆ. ಈ ಕುರಿತು ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.