ಶಾಲೆಗೆ ಹೋಗದಕ್ಕೆ ಬ್ಯಾಟಿನಿಂದ ಹೊಡೆದು 14 ವರ್ಷದ ಮಗನ ಕೊಂದ ತಂದೆ: ಆರೋಪಿ ಸೆರೆ

ಬೆಂಗಳೂರು: ಶಾಲೆಗೆ ಹೋಗದೆ ದಾರಿ ತಪ್ಪಿದ ತನ್ನ ಮಗನನ್ನು ಕುಡಿದ ಮತ್ತಿನಲ್ಲಿ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಬಳಿಕ ತಲೆಯನ್ನು ಗೋಡೆಗೆ ಗುದ್ದಿಸಿ ಹತ್ಯೆಗೈದ ಆರೋಪದ ಮೇರೆಗೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಶಿನಗರದ ನಿವಾಸಿ ತೇಜಸ್…

crime news

ಬೆಂಗಳೂರು: ಶಾಲೆಗೆ ಹೋಗದೆ ದಾರಿ ತಪ್ಪಿದ ತನ್ನ ಮಗನನ್ನು ಕುಡಿದ ಮತ್ತಿನಲ್ಲಿ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಬಳಿಕ ತಲೆಯನ್ನು ಗೋಡೆಗೆ ಗುದ್ದಿಸಿ ಹತ್ಯೆಗೈದ ಆರೋಪದ ಮೇರೆಗೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಶಿನಗರದ ನಿವಾಸಿ ತೇಜಸ್ (14) ಮೃತ ದುರ್ದೈವಿ. ಈ ಹತ್ಯೆ ಬಳಿಕ ಪರಾರಿಯಾಗಿದ್ದ ತಂದೆ ರವಿಕುಮಾರ್‌ನನ್ನು ಯಲಚೇನಹಳ್ಳಿ ಸಮೀಪ ಪೊಲೀಸರು ಬಂಧಿಸಿದ್ದಾರೆ. ಶಾಲೆಗೆ ಹೋಗದೆ ಮನೆಯಲ್ಲಿ ಮೊಬೈಲ್ ರಿಪೇರಿ ಮಾಡಿಸುವಂತೆ ಹಠ ಮಾಡುತ್ತಿದ್ದ ಮಗನಿಗೆ ಶುಕ್ರವಾರ ಬೆಳಗ್ಗೆ ರವಿಕುಮಾರ್ ಬುದ್ಧಿಮಾತು ಹೇಳಿದ್ದಾರೆ. ಆಗ ಮಗ ರಚ್ಚೆ ಮಾಡಿದ್ದರಿಂದ ಕೆರಳಿದ ಆತ, ಮನಬಂದಂತೆ ಮಗನಿಗೆ ಹೊಡೆದಿದ್ದಲ್ಲದೆ ತಲೆಯನ್ನು ಗೋಡೆ ಗುದ್ದಿಸಿದ್ದಾರೆ. ಈ ಹಲ್ಲೆ ನಡೆದ ಕೆಲ ತಾಸುಗಳ ಬಳಿಕ ತೇಜಸ್‌ನನ್ನು ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೃತ್ಯ ಎಸಗಿ ಪರಾರಿಯಾಗಿದ್ದ ಮೃತನ ತಂದೆಯನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಶಿನಗರದಲ್ಲಿ ಕುಟುಂಬದೊಂದಿಗೆ ರವಿಕುಮಾರ್ ನೆಲೆಸಿದ್ದು, ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದ. ಕೆಲ ದಿನಗಳಿಂದ ರವಿಕುಮಾರ್ ವಿಪರೀತ ಮದ್ಯ ವ್ಯಸನಿಯಾಗಿದ್ದ. ಆತನ ಪತ್ನಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮಕ್ಕಳ ಪೈಕಿ ಕೊಲೆಯಾದ ತೇಜಸ್‌ ಕಾಶಿನಗರದ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ ಶಾಲೆಗೆ ಗೈರಾಗಿ ತನ್ನ ಸ್ನೇಹಿತರ ಜತೆ ತೇಜಸ್‌ ಅಲೆಯುತ್ತಿದ್ದ. ಈ ಬಗ್ಗೆ ಆತನ ಪೋಷಕರಿಗೆ ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದರು. ಹಲವು ಬಾರಿ ಮಗನಿಗೆ ರವಿಕುಮಾರ್ ಬುದ್ಧಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Vijayaprabha Mobile App free

ಗುರುವಾರ ರಾತ್ರಿ ರವಿಕುಮಾರ್‌ಗೆ ತೇಜಸ್‌ನ ಶಾಲೆಯ ಮುಖ್ಯ ಶಿಕ್ಷಕಿ ಕರೆ ಮಾಡಿ ಮಗ ಶಾಲೆಗೆ ಬರುತ್ತಿಲ್ಲವೆಂದು ಹೇಳಿದ್ದರು. ಈ ಬಗ್ಗೆ ವಿಚಾರಿಸಿದ ತಂದೆಗೆ ತೇಜಸ್ ಉಡಾಫೆ ಉತ್ತರ ನೀಡಿದ್ದ. ಆಗ ಮಗನ ಮೇಲೆ ರವಿಕುಮಾರ್ ಕೂಗಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ತನ್ನ ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ತೇಜಸ್ ಗಲಾಟೆ ಶುರು ಮಾಡಿದ್ದ. ಆಗ ಶಾಲೆಗೆ ಹೋಗದ ನಿನಗೆ ಯಾಕೆ ಮೊಬೈಲ್ ಎಂದು ರವಿಕುಮಾರ್ ಪ್ರಶ್ನಿಸಿದ್ದ. ಅಷ್ಟರಲ್ಲಾಗಲೇ ಮದ್ಯ ಸೇವಿಸಿದ್ದ ರವಿಕುಮಾರ್‌, ತನ್ನ ಮಾತು ಕೇಳದ ಮಗನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದಿಲ್ಲದೆ ಆತನ ತಲೆ ಹಿಡಿದು ಗೋಡೆ ಗುದ್ದಿಸಿದ್ದಾರೆ. ಮಗನಿಗೆ ಹೊಡೆಯುತ್ತಿದ್ದರೂ ಪತ್ನಿ ಶಶಿಕಲಾ ಮೂಕ ಪ್ರೇಕ್ಷಕರಾಗಿದ್ದರು. ಈ ಹಲ್ಲೆಯಿಂದ ನಿತ್ರಾಣನಾಗಿ ತೇಜಸ್ ಕುಸಿದಿದ್ದಾನೆ.

ತಲೆನೋವು ಎಂದು ಬಳಲುತ್ತಿದ್ದ ಆತನನ್ನು ಮಧ್ಯಾಹ್ನ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ಮುಂದಾಗಿದ್ದಾರೆ. ಆದರೆ ತಲೆಗೆ ಬಿದ್ದ ಗಂಭೀರ ಪೆಟ್ಟಿನಿಂದ ಮೆದುಳಿನಲ್ಲಿ ರಕ್ತಸ್ರಾವವಾಗಿ ಆತ ಕೊನೆಯುಸಿರೆಳೆದಿದ್ದಾನೆ. ಮಗ ಮೃತಪಟ್ಟಿದ್ದು ಗೊತ್ತಾದ ಕೂಡಲೇ ರವಿಕುಮಾರ್ ಕಾಲ್ಕಿತ್ತಿದ್ದ. ಈ ಗಲಾಟೆ ಬಗ್ಗೆ ಪೊಲೀಸರಿಗೆ ಸ್ಥಳೀಯರು ವಿಷಯ ಮುಟ್ಟಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.