ಬಿಜ್ನೋರ್ (ಉತ್ತರ ಪ್ರದೇಶ): ಪ್ರಾಣ ರಕ್ಷಣೆಗಾಗಿ ಎಂತಹ ಕ್ರೂರ ಪ್ರಾಣಿಗಳ ಜತೆಗೆ ಮಾನವ ಹೊರಡಬಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ಇಲ್ಲೊಬ್ಬ ರೈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ಮಾಡಿದ ಚಿರತೆಯನ್ನು ಕೊಲೆ ಮಾಡಿದ್ದಾನೆ.
ತನ್ನನ್ನು ಕೊಲ್ಲಲು ಬಂದ ಚಿರತೆಯನ್ನು ರೈತರೊಬ್ಬರು ಕೇವಲ ಬಡಿಗೆ ಹಿಡಿದು ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.
ಬಿಕ್ಕವಾಲಾ ಹಳ್ಳಿಯ 60 ವರ್ಷದ ತೆಗ್ವೀರ್ ಸಿಂಗ್ ಎಂಬ ರೈತ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರನೇ ಬಂದ ಚಿರತೆಯೊಂದು ಆತನ ಮೇಲೆ ಎರಗಿ, ಆತನನ್ನು ಸಮೀಪದ ಪೊದೆಯತ್ತ ಎಳೆಯಲು ಪ್ರಯತ್ನಿಸಿದೆ. ಈ ವೇಳೆ ಚಿರತೆಯಿಂದ ತಪ್ಪಿಸಿಕೊಳ್ಳಲು ಭಾರೀ ಪ್ರಯತ್ನ ನಡೆಸಿದ ಸಿಂಗ್, ಕೊನೆಗೆ ದೊಣ್ಣೆಯಿಂದ ಚಿರತೆ ತಲೆಗೆ ಬಲವಾದ ಏಟು ನೀಡಿದ್ದಾನೆ. ಈ ಏಟಿಗೆ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ರೈತ ಬಚಾವ್ ಆಗಿದ್ದಾನೆ. ಘಟನೆಯಲ್ಲಿ ಸಿಂಗ್‌ಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.