ಗುಜರಾತ್ (ಮೆಹ್ಸಾನಾ): ಸತ್ತ ವ್ಯಕ್ತಿ ಪ್ರತ್ಯಕ್ಷನಾಗುವುದು ಕನಸಿನಲ್ಲಿ ಮಾತ್ರ. ಆದರೆ ಇಲ್ಲೊಬ್ಬರು ತಮ್ಮದೇ ತಿಥಿಗೆ ಬಂದಿರುವ ಘಟನೆ ಗುಜರಾತ್‌ನ ಮೆಹ್ಸಾನಾದಲ್ಲಿ ನಡೆದಿದೆ.
ಹೌದು, ಅಕ್ಟೋಬರ್ 27ರಂದು 43 ವರ್ಷದ ಬ್ರಿಜೇಶ್ ಸುತಾರ್ ನರೋಡಾದಿಂದ ನಾಪತ್ತೆಯಾಗಿದ್ದ. ಆತನ ಪತ್ತೆಗೆ ಕುಟುಂಬ ಹಲವೆಡೆ ಹುಡುಕಾಡಿ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ 2 ವಾರಗಳ ಬಳಿಕ ಶವವೊಂದು ಸಾಬರಮತಿ ಸೇತುವೆ ಬಳಿ ಪತ್ತೆಯಾಗಿತ್ತು. ಕುಟುಂಬವನ್ನು ದೇಹ ರುಜುವಾತಿಗೆ ಕರೆಸಲಾಗಿದ್ದು, ಅದು ಆತನದೇ ಎಂದು ಕುಟುಂಬ ಭಾವಿಸಿತ್ತು.
ಮಾಧ್ಯಮ ವರದಿಗಳು ಮಧ್ಯಮ ವಯಸ್ಸಿನ ವ್ಯಕ್ತಿ ಮತಿಭ್ರಮಣೆ ಹಾಗೂ ಹಣಕಾಸಿನ ತೊಂದರೆಯಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದವು. ಶುಕ್ರವಾರ ಆತನ ಮಗನಿಂದ ಶವಸಂಸ್ಕಾರವನ್ನು ಮಾಡಿಸಲಾಗಿತ್ತು. ಆದರೆ ಅವರಾರೂ ಊಹಿಸದಂತೆ ಬ್ರಿಜೇಶ್ ತನ್ನ ತಿಥಿ ದಿನವೇ ಕುಟುಂಬಸ್ಥರ ಭೇಟಿಗೆ ಬಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಈಗ ಈ ಪ್ರಕರಣ ತಲೆನೋವಾಗಿದ್ದು, ಸತ್ತವನು ಯಾರು, ಯಾರ ದೇಹವನ್ನು ಮಣ್ಣಮಾಡಲಾಯಿತು ಎಂದು ಪೊಲೀಸರು ಚಿಂತೆಗೆ ಬಿದ್ದಿದ್ದಾರೆ. ಅಲ್ಲದೆ ತನಿಖೆ ಮುಂದುವರೆಸಿದ್ದಾರೆ.