ದಾವಣಗೆರೆ: ಇಲ್ಲಿಯ ಯುಬಿಡಿಟಿ (ಯೂನಿವರ್ಸಿಟಿ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ್ ಇಂಜನಿಯರಿಂಗ್ ಕಾಲೇಜ್) ಉಳಿವಿಗಾಗಿ AIDSO ನೇತೃತ್ವದಲ್ಲಿ ವಿದ್ಯಾರ್ಥಿಗಳು ಅ.16ರಂದು ಬೃಹತ್ ಹೋರಾಟ ಹಮ್ಮಿಕೊಂಡಿದ್ದು, ಅಂದು ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ.
ಹೌದು, 1951ರಲ್ಲಿ ಸ್ಥಾಪಿಸಲಾದ ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ದಿನಗಳೆದಂತೆ ಖಾಸಗೀಕರಣದತ್ತ ದಾಪುಗಾಲು ಹಾಕುತ್ತಿದ್ದು, ಸಾವಿರಾರು ಬಡ ವಿದ್ಯಾರ್ಥಿಗಳ ಕನಸಿಗೆ ಕೊಳ್ಳೆ ಇಡಲಾಗುತ್ತಿದೆ. ಸರ್ಕಾರಿ ಇಂಜಿನಯರಿಂಗ್ ಕಾಲೇಜಿನ ದುಬಾರಿ ಶುಲ್ಕವನ್ನು (₹47000) ಭರಿಸಲಾಗದೆ ಒದ್ದಾಡುತ್ತಿರುವ ಬಡವರ ಮೇಲೆ ಮತ್ತೊಂದು ಬರೆ ಎನ್ನುವಂತೆ ಯುಬಿಡಿಟಿಯಲ್ಲಿ ಶೇ.50 ರಷ್ಟು ಸೀಟುಗಳನ್ನು ಪೇಮೆಂಟ್ ಕೋಟಾದಡಿ ₹97000 ಶುಲ್ಕಕ್ಕೆ ಕೊಡಲಾಗುತ್ತಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಅ.16ರಂದು ನಡೆಯುವ ಪ್ರತಿಭಟನೆಗೆ ಆಟೋ ಚಾಲಕರು, ಉದ್ಯಮಿಗಳು, ಬೀದಿ ಬದಿ ವ್ಯಾಪಾರಸ್ಥರು ಸೇರಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕಾಲೇಜಿನ ಹಳೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಜನರಿಂದ ದೇಣಿಗೆ ಸಂಗ್ರಹ:
ಹೋರಾಟಕ್ಕೆ ಅಗತ್ಯವಿರುವ ಹಣಕ್ಕಾಗಿ ಟ್ರೈನ್, ಬಸ್ ಸ್ಟ್ಯಾಂಡ್ ಸೇರಿ ಇತರ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿಗಳೇ ಫಂಡ್ (ದೇಣಿಗೆ) ಸಂಗ್ರಹ ಮಾಡುತ್ತಿದ್ದಾರೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿದ್ಯಾರ್ಥಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ಜನರ ಒತ್ತಾಸೆಯಾಗಿದೆ.