ತನ್ನ ಹೆತ್ತವರನ್ನೇ ಕೊಂದು ದೇಹವನ್ನು ಮನೆಯಲ್ಲೇ ಸಮಾಧಿ ಮಾಡಿ ಅದರೊಂದಿಗೆ 4 ವರ್ಷಗಳ ಕಾಲ ವಾಸ ಮಾಡಿದ್ದ ಮಹಿಳೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
36 ವರ್ಷದ ವರ್ಜೀನಿಯಾ ಮೆಕ್‌ಕಲೌಗ್ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಹಿಳೆ. ಈಕೆ ತನ್ನ 70 ವರ್ಷ ವಯಸ್ಸಿನ ತಂದೆ ಜಾನ್ ಮೆಕ್‌ಕಲ್ಲಾಫ್‌ಗೆ ಪ್ರಿಸ್ಕ್ರಿಪ್ಪನ್ ಔಷಧಿಗಳೊಂದಿಗೆ ವಿಷವನ್ನು ನೀಡಿದ್ದಳು. ತದನಂತರ ಎರಡು ದಿನಗಳ ಬಳಿಕ ತನ್ನ 71 ವರ್ಷದ ತಾಯಿ ಲೋಯಿಸ್ ಮೆಕ್‌ಕಲೌಗೆ ಇರಿದು ಹತ್ಯೆ ಮಾಡಿದ್ದಳು. ಇಬ್ಬರ ದೇಹವನ್ನೂ ಮನೆಯಲ್ಲೇ ಸಮಾಧಿ ಮಾಡಿದ್ದಲ್ಲದೇ, ನಾಲ್ಕು ವರ್ಷಗಳ ಕಾಲ ಅಲ್ಲೇ ವಾಸಿಸುತ್ತಿದ್ದಳು.
ತಂದೆ- ತಾಯಿಯರ ಕ್ರೆಡಿಟ್ ಕಾರ್ಡ್ ಮೇಲೆ ಬೃಹತ್ ಮೊತ್ತದ ಸಾಲ ಪಡೆದಿದ್ದಲ್ಲದೆ, ಅವರ ಪಿಂಚಣಿ ಹಣವನ್ನೂ ನೀರಿನಂತೆ ಖರ್ಚು ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದಳು. ಪ್ರಕರಣ ಪೊಲೀಸರಿಗೆ ತಿಳಿದು ಕೊನೆಗೆ ನಾಲ್ಕು ವರ್ಷಗಳ ಬಳಿಕ ಪೊಲೀಸ್ ಪ್ರಕರಣ ದಾಖಲಾಗಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣೆಯ ವೇಳೆ ತಾನು ಮಾಡಿದ ಕೊಲೆಗಳನ್ನು ಒಪ್ಪಿಕೊಂಡ ಈಕೆಗೆ ನ್ಯಾಯಾಧೀಶರಾದ ಜಸ್ಟಿಸ್ ಜಾನ್ಸನ್, ಕನಿಷ್ಠ 36 ವರ್ಷಗಳ ಅವಧಿಯೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.