ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಸಾಮಾಜಿಕ ವ್ಯವಸ್ಥೆಯನ್ನು ಬಲಿಕೊಟ್ಟು ವಿಪಕ್ಷಗಳ ಕೂಟವಾದ ಮಹಾ ವಿಕಾಸ್ ಅಘಾಡಿ (ಎಂವಿಎ), ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ. ಮುಸ್ಲಿಮರಿಗೆ ಧರ್ಮಾಧರಿತ ಮೀಸಲು ನೀಡಿ ಇತರರ ಮೀಸಲು ಕಿತ್ತುಕೊಳ್ಳುತ್ತಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ.
ಜಲಗಾಂವ್‌ನ ರೇವರ್ ವಿಧಾನಸಭಾ ಕ್ಷೇತ್ರದಲ್ಲಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಶಾ, ‘ಮುಸ್ಲಿಂ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ಕೋರಿ ಉಲೇಮಾ ಅಸೋಸಿಯೇಷನ್ ಪ್ರತಿಪಕ್ಷ ಕಾಂಗ್ರೆಸ್‌ಗೆ ಮನವಿ ಸಲ್ಲಿಸಿದೆ. ಇದಕ್ಕೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಕೂಡ ಒಪ್ಪಿದ್ದಾರೆ. ಮುಸ್ಲಿಮರಿಗೆ ಶೇ.10ರಷ್ಟು ಮೀಸಲು ನೀಡಿದರೆ ಅದು ದಲಿತರು, ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರಯೋಜನಗಳನ್ನೇ ಆಪೋಶನ ತೆಗೆದುಕೊಳ್ಳುತ್ತದೆ. ಏಕೆಂದರೆ ಮೀಸಲಿಗೆ ಶೇ.50ರ ಮಿತಿ ಇದ್ದು ಅಷ್ಟರೊಳಗೇ ಇತರರ ಮೀಸಲನ್ನು ತಿಂದು ಹಾಕಿ ಮುಸ್ಲಿಮರಿಗೆ ನೀಡಲಾಗುತ್ತದೆ’ ಎಂದು ವಿಶ್ಲೇಷಿಸಿದರು.
ಬಿಜೆಪಿ ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ದೃಢವಾಗಿ ಬದ್ಧ. ಆದರೆ ಮುಸ್ಲಿಮರಿಗೆ ಯಾವುದೇ ರೀತಿಯ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತದೆ. ಇದು ನಮ್ಮ ಬದ್ಧತೆ’ ಎಂದು ಶಾ ನುಡಿದರು. ಎಂವಿಎ ಪಕ್ಷಗಳು ತಮ್ಮ ತುಷ್ಟೀಕರಣದ ರಾಜಕೀಯದಿಂದಾಗಿ ದೇಶದ ಸುರಕ್ಷತೆಯನ್ನು ರಾಜಿ ಮಾಡಿಕೊಂಡಿವೆ. ಅವರು ಮತಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.