ಬೆಂಗಳೂರು: ರಾಜ್ಯ ರಾಜಧಾನಿಯನ್ನು ಪದೇ ಪದೇ ಕಾಡುವ ತ್ಯಾಜ್ಯ ಮತ್ತು ರಸ್ತೆಗುಂಡಿ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ವಾಹನಗಳಲ್ಲಿ ಕ್ಯಾಮೆರಾ ಅಳವಡಿಸಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಈ ಮೂಲಕ ಜನರ ಸಮಸ್ಯೆಗಳನ್ನು ಅರಿತು ಪರಿಹಾರ ಕ್ರಮ ಕೈಗೊಳ್ಳಲು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ನಗರದಲ್ಲಿ ರಸ್ತೆ ಗುಂಡಿ, ಘನ ತ್ಯಾಜ್ಯ ವಿಲೇವಾರಿಯಲ್ಲಿನ ಸಮಸ್ಯೆ ಸೇರಿದಂತೆ ಮತ್ತಿತರ ಸಮಸ್ಯೆಗಳು ಪದೇಪದೆ ಹೆಚ್ಚುತ್ತಿವೆ. ರಸ್ತೆ ಗುಂಡಿಗಳನ್ನು ಮುಚ್ಚಿದರೂ ಮತ್ತೆ ಸೃಷ್ಟಿಯಾಗುತ್ತಿವೆ ಹಾಗೂ ತ್ಯಾಜ್ಯ ವಿಲೇವಾರಿ ಮಾಡಿದರೂ ರಸ್ತೆ ಬದಿಯಲ್ಲಿ ಶೇಖರಣೆಯಾಗುತ್ತಿವೆ. ಆಯಾ ವಾರ್ಡ್‌ನ ಅಧಿಕಾರಿಗಳು ವಾರ್ಡ್ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದಾಗ ಮಾತ್ರ ಆ ಸಮಸ್ಯೆಗಳು ತಿಳಿಯುತ್ತವೆ. ಇಲ್ಲದಿದ್ದರೆ, ಜನರು ರಸ್ತೆ ಗುಂಡಿಗಳು, ತ್ಯಾಜ್ಯದ ನಡುವೆಯೇ ಓಡಾಡುವ ಪರಿಸ್ಥಿತಿ ಎದುರಾಗುತ್ತದೆ. ಅದನ್ನು ಪರಿಹಾರ ನೀಡಲು ಹಾಗೂ ನಗರದಲ್ಲಿನ ಸಮಸ್ಯೆಗಳ ಮೇಲೆ ನಿಗಾವಹಿಸಲು ವಾಹನಗಳ ಮೇಲೆ ಕ್ಯಾಮೆರಾಗಳನ್ನು ಅಳವಡಿಸಿ ಅವುಗಳ ಸಂಚರಿಸುವ ಮಾರ್ಗದಲ್ಲಿ ಚಿತ್ರೀಕರಿಸಿ, ಅದರಲ್ಲಿ ಯಾವುದಾದರೂ ಸಮಸ್ಯೆ ಕಂಡು ಬಂದರೆ ಅದನ್ನು ನಿವಾರಿಸಲು ನಿರ್ಧರಿಸಲಾಗಿದೆ.
ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಗೆ ಸೇರಿದ 250ಕ್ಕೂ ಹೆಚ್ಚಿನ ವಾಹನಗಳ ಮೇಲೆ ಕ್ಯಾಮೆರಾ ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ಅದಕ್ಕೆ ಸರ್ಕಾರದಿಂದಲೂ ಅನುಮತಿ ಪಡೆಯಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕ್ಯಾಮೆರಾ ಅಳವಡಿಕೆ ಹಾಗೂ ಅದರಲ್ಲಿ ಚಿತ್ರೀಕರಿಸಲಾಗುವ ದೃಶ್ಯಗಳನ್ನು ಪರಿಶೀಲಿಸಿ ಸಮಸ್ಯೆಗಳ ಪಟ್ಟಿ ಮಾಡಲು ಖಾಸಗಿ ಸಂಸ್ಥೆ ನೇಮಿಸಲಾಗುತ್ತದೆ.
250 ವಾಹನಗಳಲ್ಲಿ ಕ್ಯಾಮೆರಾ:
ರಸ್ತೆ ಗುಂಡಿ, ತ್ಯಾಜ್ಯ ಸಮಸ್ಯೆ ನಿವಾರಿಸಲು ಹಾಗೂ ಅವುಗಳನ್ನು ಪತ್ತೆ ಮಾಡಲು ವಾಹನಗಳ ಮೇಲೆ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಮೊದಲಿಗೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಗೆ ಸೇರಿದ 250 ವಾಹನಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಅದನ್ನು ಹೆಚ್ಚಿಸಲಾಗುವುದು. ಈ ಕ್ಯಾಮೆರಾ ಮೂಲಕ ಕಂಡು ಬರುವ ರಸ್ತೆ ಗುಂಡಿ, ತ್ಯಾಜ್ಯ ವಿಲೇವಾರಿ ಆಗದಿರುವುದು, ಚರಂಡಿಗಳಲ್ಲಿ ಸಮಸ್ಯೆ ಉಂಟಾಗಿರುವುದು, ಬಿಡಾಡಿ ದನಗಳು ಕಂಡು ಬರುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.