ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ಫೆಬ್ರವರಿಯಲ್ಲಿ ಹಮ್ಮಿಕೊಳ್ಳಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಬಗ್ಗೆ ಚರ್ಚಿಸುವ ಸಲುವಾಗಿ ನಾಳೆ (ಜೂನ್ 28) ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಇಂದಿನಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಲಿದ್ದಾರೆ. ಅಲ್ಲದೆ, ಫೆಬ್ರವರಿಯಲ್ಲಿ ರಾಜ್ಯದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರದಿಂದ ಬೇಕಾಗುವ ಅನುಮತಿಗಳಿಗೆ ಏಕಗವಾಕ್ಷಿ ಮಾಡಲು ಒತ್ತಡ ಹೇರಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಬರಬೇಕಾದ ಅನುದಾನಗಳ ಕುರಿತು ಪ್ರಧಾನಿ ಬಳಿ ಸಿಎಂ ಸಿದ್ದು ಚರ್ಚೆ ಮಾಡಲಿದ್ದಾರೆ.
ಅದಕ್ಕೂ ಮುನ್ನ ಇಂದು ರಾಜ್ಯದ 28 ಸಂಸದರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಜೂನ್ 29ರಂದು ಅಮಿತ್ ಶಾ ಸೇರಿ ಹಲವು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಭೇಟಿ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ ಹಾಗೂ ಇತರೆ ಸಚಿವರು ಸಾಥ್ ನೀಡಲಿದ್ದಾರೆ.