ಶ್ರೀನಗರ: ಜೂ.29ರಿಂದ ಪ್ರಸಿದ್ಧ ಅಮರನಾಥ ಯಾತ್ರೆ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆ ಜಮ್ಮು-ಕಾಶ್ಮೀರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಅಮರನಾಥ ಬೇಸ್ಕ್ಯಾಂಪ್ಗೂ 3 ಹಂತದ ಭದ್ರತೆ ಒದಗಿಸಲಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 260 ಡಿಗ್ರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾತ್ರೆ ಸಾಗುವ ಹೆದ್ದಾರಿಯ ಸುರಕ್ಷತೆ ಖಾತರಿಗಾಗಿ ವಾಹನಗಳನ್ನು ಪರಿಶೀಲಿಸಲು 60 ಕ್ಯಾಮೆರಾಗಳು, ಬಾಡಿ ಸ್ಕ್ಯಾನರ್ಗಳನ್ನು ಅಳವಡಿಸಲಾಗಿದೆ. ಜೊತೆಗೆ ರಂಭಾನ್ ಜಿಲ್ಲೆಯ ಉಧಂಪುರದಿಂದ ಬನಿಹಾಲ್ ವರೆಗೆ 260 ಡಿಗ್ರಿಯ 10 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 24/7 ಕಂಟ್ರೋಲ್ ರೂಂ ರಚನೆ ಮಾಡಲಾಗಿದೆ. ಜಮ್ಮುವಿನ ಭಗವತಿ ನಗರ ಯಾತ್ರಾರ್ಥಿಗಳ ಬೇಸ್ಕ್ಯಾಂಪ್ ಆಗಿರುತ್ತದೆ. ಹೀಗಾಗಿ ಈ ಸ್ಥಳದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕೂಡಲೇ ಪ್ರತಿಕ್ರಿಯೆ ತಂಡಗಳನ್ನೂ ರಚಿಸಲಾಗಿದೆ ಎಂದು ಎಸ್ಎಸ್ಪಿ ಮಾಹಿತಿ ನೀಡಿದ್ದಾರೆ.
ಉಗ್ರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಗುಪ್ತಚರರ ನೇಮಿಸಲಾಗುವುದು. ನೈಸರ್ಗಿಕ, ಮಾನವ ನಿರ್ಮಿತ ವಿಪತ್ತುಗಳ ನಿರ್ವಹಣೆಗೆ ಯೋಜಿಸಲಾಗಿದೆ. ಗಡಿ ಪ್ರದೇಶಗಳಲ್ಲೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಗಸ್ತು, ಮೇಲ್ವಿಚಾರಣೆ ಹೆಚ್ಚಳ ಮಾಡಿ ವ್ಯವಸ್ಥೆ ಕಲ್ಪಿಸಲಾಗಿದೆ.