ಹಾವೇರಿ: ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಪೀರ್ ಖಾದ್ರಿ ಅವರು ಸಿಎಂ ಸಿದ್ದರಾಮಯ್ಯ ಮಾತಿಗೂ ಬಗ್ಗದೆ ಬಂಡಾಯದ ಬಾವುಟ ಹಾರಿಸಿದ್ದಾರೆ.
ಹೌದು, ಖಾದ್ರಿ ಜೊತೆ ಅರ್ಧ ಗಂಟೆಗೂ ಹೆಚ್ಚು ಸಮಯ ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡಿದ್ದಾರೆ. ಈ ವೇಳೆ ಖಾದ್ರಿ ಅವರು, ನಾನು ಸ್ಪರ್ಧಿಸಿದ ಚುನಾವಣೆಗಳಲ್ಲಿ ಬೊಮ್ಮಾಯಿ ವಿರುದ್ದ ಕಡಿಮೆ ಅಂತರದಿಂದ ಸೋತಿದ್ದೇನೆ. ಇದು ತಮಗೂ ತಿಳಿದಿರುವ ವಿಚಾರ . ನಾನು ಸ್ಥಳೀಯನಾಗಿ ಮತದಾರರ ನಾಡಿ ಮಿಡಿತ ಬಲ್ಲವನಾಗಿದ್ದೇನೆ. ಹೀಗಾಗಿ ನನಗೇ ಟಿಕೇಟ್ ನೀಡಬೇಕಿತ್ತು. ದಯವಿಟ್ಟು ಯಾಸೀನ್ ಖಾನ್ ಪಠಾಣ್ ನಾಮಪತ್ರ ವಾಪಾಸ್ ಹಿಂಪಡೆದು ನನಗೆ ಬೆಂಬಲ ಸೂಚಿಸಿ ಎಂದ ಮನವಿ ಮಾಡಿದ್ದಾರೆ.
ಇದೇ ವೇಳೆ ಖಾದ್ರಿಗೆ ಗದರಿದ ಸಿಎಂ ಸಿದ್ದರಾಮಯ್ಯ ಅವರು, “ಏ ವಾಪಾಸ್ ತಗೊಳಯ್ಯಾ ಖಾದ್ರಿ , ಅದೆಲ್ಲಾ ಆಗಲ್ಲ” ಎಂದಿದ್ದಾರೆ. ಅಲ್ಲದೇ, ನಿನಗೆ ಒಳ್ಳೆ ಭವಿಷ್ಯ ಇದೆ. ಖಂಡಿತವಾಗಿ ನಿನಗೆ ಒಳ್ಳೆದಾಗುತ್ತೆ ಎಂದು ಹೇಳಿದ್ದಾರೆ. ಅಲ್ಲಿಯೇ ಇದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಸಾಹೇಬ್ರು ಹೇಳ್ತಿದ್ದಾರೆ ಒಪ್ಪಿಕೋ ಎಂದು ಖಾದ್ರಿ ದುಂಬಾಲು ಬಿದ್ದಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾತಿಗೆ ಸ್ವಲ್ಪ ಹೊತ್ತು ಮೌನವಾದ ಖಾದ್ರಿ, ನಾಮಪತ್ರ ವಾಪಾಸ್ ನಿರ್ಧಾರಕ್ಕೆ ಸ್ವಲ್ಪ ಸಮಯಾವಕಾಶ ಬೇಕೆಂದು ಮನವಿ ಮಾಡಿ ಹೊರ ಬಂದಿದ್ದಾರೆ. ಇದುವರೆಗೂ ನಾಮಪತ್ರ ವಾಪಾಸ್ ನಿರ್ಧಾರ ಪೆಂಡಿಂಗ್ ಇಟ್ಟಿದ್ದಾರೆ.
ಹಾಗಾಗಿ ಶಿಗ್ಗಾಂವಿ ಕ್ಷೇತ್ರದಲ್ಲಿ ಮತ್ತೆ ಕಗ್ಗಂಟು ಮುಂದುವರೆದಿದ್ದು, ಕೈ ಪಡೆಗೆ ಅಜ್ಜಂಪೀರ್ ಖಾದ್ರಿ ತಲೆನೋವಾಗಿದ್ದಾರೆ. ಖಾದ್ರಿ ಮನವೊಲಿಸಲು ಜಮೀರ್ ಅಹ್ಮದ್ ಖಾನ್ ಅವರಿಗೆ ಮತ್ತೆ ಜವಾಬ್ದಾರಿ ನೀಡಲಾಗಿದೆ.