ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊಳವೆಬಾವಿ ಮತ್ತು ನೀರು ಹೊಂದಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಕುಸುಮ್ ಯೋಜನೆಯಡಿ ಶೇಕಡ 80 ಸಬ್ಸಿಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್, ಮೋಟರ್, ಪ್ಯಾನಲ್ ಬೋರ್ಡ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಡಿ ಜಾರಿ ಮಾಡಿರುವ ಕೃಷಿ ಪಂಪ್ ಸೆಟ್ ಗಳಿಗೆ ಸೌರಶಕ್ತಿ ಒದಗಿಸುವ ಕುಸುಮ್ ಬಿ ಯೋಜನೆ ಚಾಲ್ತಿಯಲ್ಲಿದೆ.
ಕೇಂದ್ರ ಸರ್ಕಾರ ಶೇಕಡ ೩೦ ರಷ್ಟು ಸಹಾಯಧನ ನೀಡುತ್ತಿದ್ದು, ರಾಜ್ಯ ಸರ್ಕಾರ ನೀಡುತ್ತಿದ್ದ ಶೇಕಡ 30 ರಷ್ಟು ಸಹಾಯಧನವನ್ನು ಶೇಕಡ 50 ಕ್ಕೆ ಏರಿಸಿದೆ. ಒಟ್ಟಾರೆ ಈ ಯೋಜನೆಯಡಿ ಶೇ.80 ರಷ್ಟು ಸಬ್ಸಿಡಿ ದೊರೆಯುತ್ತಿದ್ದು, ರೈತರು ತಮ್ಮ ಪಾಲಿನ ವಂತಿಗೆಯಾಗಿ ಕೇವಲ ಶೇ.20 ರಷ್ಟನ್ನು ಪಾವತಿಸಿ ಪ್ರಯೋಜಮ ಪಡೆಯಬಹುದಾಗಿದೆ ಎಂದರು.