ಬೆಂಗಳೂರು: ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ರಾಜ್ಯ ಸರ್ಕಾರ, ಇದೀಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್‌ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ ಎಂಬ ವಿಪಕ್ಷನಾಯಕ ಆರ್.ಅಶೊಕ್ ಅವರ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದು, ಟಿಕೆಟ್ ದರ (Bus Fare Hike) ಏರಿಕೆ ಏಕೆ ಅನಿವಾರ್ಯ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿ ಅವರು, ಅಶೋಕ್ ರವರೇ, ನೀವು ಸಾರಿಗೆ ಸಚಿವರಾಗಿದ್ದವರು, ಸಾರಿಗೆ ಸಂಸ್ಥೆಗಳ ಬಗ್ಗೆ ತಿಳಿದೂ ಕೂಡ ಈ ರೀತಿ ಮಾತನಾಡುತ್ತಿದ್ದಾರಾ ಎಂದರೆ ಆಶ್ಚರ್ಯವಾಗುತ್ತಿದೆ. 2013 ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ ಬಸ್ ಪ್ರಯಾಣ ದರ ಶೇ.10.5 ಏರಿಕೆ ಮಾಡಿರುವುದು ಮರೆತುಬಿಟ್ಟಿದ್ದೀರಾ? 2020ರಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಬಸ್ ಪ್ರಯಾಣ ದರ ಶೇ.12 ಹೆಚ್ಚಳ ಮಾಡಿದಾಗ ನೀವು ಕ್ಯಾಬಿನೆಟ್ ಮಂತ್ರಿಯಾಗಿದ್ದರಲ್ಲವೇ? ಆಗ ಯಾಕೆ ವಿರೋಧ ವ್ಯಕ್ತ ಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
2021ರ ನ.15ರಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸಮಿತಿಯನ್ನು ತಮ್ಮದೇ ಬಿ.ಜೆ.ಪಿ ಸರ್ಕಾರ ರಚಿಸಿತ್ತು. ಅನೇಕ ಶಿಫಾರಸುಗಳೊಂದಿಗೆ ಪ್ರಮುಖವಾಗಿ, ಬಸ್ ಪ್ರಯಾಣ ದರವನ್ನು Institutional Arrangement for Revision of Bus Fares ಶೀರ್ಷಿಕೆಯಡಿಯಲ್ಲಿ KERC ಮಾದರಿಯಲ್ಲಿ ಕಾಲಕಾಲಕ್ಕೆ ಬಸ್ ದರವನ್ನು ಹೆಚ್ಚಿಸಬೇಕು, ಆಗಷ್ಟೇ ಸಾರಿಗೆ ಸಂಸ್ಥೆಗಳು ಉಳಿಯಲು ಸಾಧ್ಯವೆಂದು ಸದರಿ ಸಮಿತಿಯು ವರದಿ ನೀಡಿದ್ದು, ನೀವು ಕ್ಯಾಬೆನೆಟ್ ಮಂತ್ರಿಯಾಗಿದ್ದಾಗ ಯಾಕೆ ಈ ವರದಿಯನ್ನು ತಿರಸ್ಕರಿಸಲಿಲ್ಲ. ತಮ್ಮದೇ ಸರ್ಕಾರ ಅಂಗೀಕಾರ ಮಾಡಿದ ವರದಿಯನ್ನು ಈಗ ಸರಿಯಿಲ್ಲವೆಂದು ಹೇಳಲು ಹೊರಟ್ಟಿದ್ದೀರಾ ಎಂದು ಕಿಡಿಕಾರಿದ್ದಾರೆ.