ಸೊಳ್ಳೆಗಳ ಸಮಸ್ಯೆಯನ್ನು ಏಕೆ ಗಂಭೀರವಾಗಿ ಪರಿಗಣಿಸಬೇಕು? ಸೊಳ್ಳೆಗಳನ್ನು ದೂರವಿಡಲು ಸುಲಭವಾದ ನೈಸರ್ಗಿಕ ವಿಧಾನಗಳು
ಸೊಳ್ಳೆಗಳು ಮನುಷ್ಯರಿಗೆ ರೋಗಗಳನ್ನು ಹರಡುವ ಸಾಮರ್ಥ್ಯವನ್ನು ಹೊಂದಿವೆ. ಸೊಳ್ಳೆಗಳು ಮಲೇರಿಯಾ, ಡೆಂಗ್ಯೂ, ಹಳದಿ ಜ್ವರ, ಚಿಕೂನ್‌ಗುನ್ಯಾ ಮತ್ತು ವೆಸ್ಟ್ ನೈಲ್ ಜ್ವರಕ್ಕೆ ಕಾರಣವಾಗಬಹುದು. ಸೊಳ್ಳೆಯಿಂದ ಹರಡುವ ರೋಗಗಳು ಸರಿಯಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ಸಾವಿಗೂ ಕಾರಣವಾಗಬಹುದು.
ಸೊಳ್ಳೆಗಳ ವಿಧಗಳು ಮತ್ತು ಅವುಗಳಿಂದ ಹರಡುವ ರೋಗಗಳು
ಈಡಿಸ್ ಸೊಳ್ಳೆಗಳು:- ಚಿಕೂನ್‌ಗುನ್ಯಾ, ಡೆಂಗ್ಯೂ, ರಿಫ್ಟ್ ವ್ಯಾಲಿ ಜ್ವರ, ಹಳದಿ ಜ್ವರ, ದುಗ್ಧರಸ ಫೈಲೇರಿಯಾಸಿಸ್ ಮತ್ತು ಝಿಕಾ
ಅನಾಫಿಲಿಸ್ ಸೊಳ್ಳೆಗಳು: ಮಲೇರಿಯಾ ಮತ್ತು ದುಗ್ಧರಸ ಫೈಲೇರಿಯಾ
ಕ್ಯುಲೆಕ್ಸ್ ಸೊಳ್ಳೆಗಳು: ಮೆದುಳಿನ ತೀವ್ರವಾದ ಉರಿಯೂತವನ್ನು ಉಂಟುಮಾಡುವ ಜಪಾನೀಸ್ ಎನ್ಸೆಫಾಲಿಟಿಸ್
ಸೊಳ್ಳೆಗಳನ್ನು ತಡೆಗಟ್ಟುವುದು ಹೇಗೆ..?
ಬೆಳ್ಳುಳ್ಳಿ: ಬೆಳ್ಳುಳ್ಳಿಯ ವಾಸನೆಯಿಂದ ಸೊಳ್ಳೆಗಳನ್ನು ದೂರವಿಡಬಹುದು. ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ತೆಗೆದುಕೊಂಡು ಸಣ್ಣದಾಗಿ ಕತ್ತರಿಸಿ, ಅವುಗಳನ್ನು ಮಿನಿರಲ್ ಆಯಿಲ್ ನಲ್ಲಿ ಹಾಕಿ, ನಂತರ ಅದನ್ನು 24 ಗಂಟೆಗಳವರೆಗೆ ಹಾಗೆಯೇ ಬಿಡಿ.
ಅವು ಸಂಪೂರ್ಣವಾಗಿ ನೆನೆದ ನಂತರ ಬೆಳ್ಳುಳ್ಳಿ ತುಂಡುಗಳನ್ನು ತೆಗೆದು, ಎಣ್ಣೆಯನ್ನು 2 ಕಪ್ ನೀರು ಮತ್ತು 1 ಟೀಸ್ಪೂನ್ ತಾಜಾ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಅದನ್ನು ಸೊಳ್ಳೆಗಳು ಹೆಚ್ಚಿರುವ ಸ್ಥಳಗಳಲ್ಲಿ ಸಿಂಪಡಿಸಿ.
ತುಳಸಿ: ತುಳಸಿಯು ಸ್ವಾಭಾವಿಕವಾಗಿ ಅದರ ಸುವಾಸನೆಯನ್ನು ಹೊರಸೂಸುತ್ತದೆ. ಹಾಗಾಗಿ, ತುಳಸಿಯನ್ನು ಪುಡಿಮಾಡುವ ಅಥವಾ ಇನ್ನಾವುದೇ ರೀತಿಯಲ್ಲಿ ತಯಾರಿಸುವ ಅಗತ್ಯವಿಲ್ಲ. ತುಳಸಿಯು ಸೊಳ್ಳೆ ಲಾರ್ವಾಗಳಿಗೆ ವಿಷಕಾರಿಯಾಗಿದೆ. ಆದ್ದರಿಂದ, ಸೊಳ್ಳೆಗಳು ಮೊಟ್ಟೆಗಳನ್ನಿಡದಂತೆ ತಡೆಯಲು ನೀವು ಅದನ್ನು ನಿಂತಿರುವ ನೀರಿನ ಬಳಿ ಇಡಬಹುದು.
ತುಳಸಿ ಎಲೆಗಳಿಂದ ತೆಗೆದ ಎಣ್ಣೆಯು ಸೊಳ್ಳೆಗಳನ್ನು ಓಡಿಸಲು ತುಂಬಾ ಪರಿಣಾಮಕಾರಿಯಾಗಿದೆ.
ಪುದೀನಾ: ಸೊಳ್ಳೆಗಳು ಪುದೀನಾ ಸುಗಂಧವನ್ನು ಇಷ್ಟಪಡುವುದಿಲ್ಲ. ಪುದೀನಾ ಸಸ್ಯಗಳ ಉಪಸ್ಥಿತಿಯು ಸೊಳ್ಳೆಗಳ ಸಮಸ್ಯೆಯನ್ನು ದೂರಗೊಳಿಸುತ್ತದೆ. ಪುದೀನಾ ಎಲೆಗಳನ್ನು ಪುಡಿಮಾಡಿ, ಚರ್ಮದ ಮೇಲೆ ಉಜ್ಜುವ ಮೂಲಕ ಸೊಳ್ಳೆ ನಿವಾರಕವಾಗಿ ಬಳಸಬಹುದು.
ಲೆಮನ್ ಗ್ರಾಸ್ : ನಿಂಬೆ ಹುಲ್ಲು ಒಂದು ಸೂಕ್ಷ್ಮವಾದ ಸಿಟ್ರಸ್ ಪರಿಮಳವನ್ನು ಹೊಂದಿರುವ ಮೂಲಿಕೆಯಾಗಿದೆ. ಲೆಮನ್ ಗ್ರಾಸ್ ಸಾರಭೂತ ತೈಲ ಮತ್ತು ಆಲಿವ್ ಎಣ್ಣೆಯ ಸಂಯೋಜನೆಯು ಸೊಳ್ಳೆಗಳ ವಿರುದ್ಧ ಶೇ.98.8ರಷ್ಟು ರಕ್ಷಣೆಯನ್ನು ಒದಗಿಸುತ್ತದೆ.
ನಿಂಬೆಹುಲ್ಲಿನಲ್ಲಿ ಸಿಟ್ರೊನೆಲ್ಲಾ ಇರುತ್ತದೆ. ಈ ನೈಸರ್ಗಿಕ ತೈಲವನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಸಿಟ್ರೊನೆಲ್ಲಾ ಎಣ್ಣೆಯನ್ನು ಹೊಂದಿರುವ ಯಾವುದೇ ಸಸ್ಯವು ಸೊಳ್ಳೆಗಳನ್ನು ದೂರಗೊಳಿಸುತ್ತದೆ.
ಬೇವಿನ ಎಣ್ಣೆ: ಸಾವಯವ ಬೇವಿನ ಎಣ್ಣೆಯು ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಅತ್ಯಂತ ಸುಲಭವಾದ ಮಾರ್ಗಗಳಲ್ಲೊಂದಾಗಿದೆ. ನೀವು ಮನೆಯಿಂದ ಹೊರಹೋಗುವ ಮೊದಲು ಹೊರಕಾಣುವ ಚರ್ಮದ ಮೇಲೆ ಬೇವಿನ ಎಣ್ಣೆಯನ್ನು ಹಚ್ಚಿಕೊಂಡರೆ ಸಾಕು ನೀವು ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು.
ಬೇವಿನ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಕೂಡ ಹಚ್ಚಿಕೊಳ್ಳಬಹುದು.
ಹೆಚ್ಚು ಸೊಳ್ಳೆ ಕಡಿತಕ್ಕೆ ಗುರಿಯಾಗುವರು ಯಾರು..?
ಜೆನೆಟಿಕ್ಸ್ ಮತ್ತು Co2 : ಸೊಳ್ಳೆಗಳು ಆದ್ಯತೆ ನೀಡುವ ಪರಿಮಳವನ್ನು ತಳೀಯವಾಗಿ ನಿರ್ಧರಿಸಲಾಗುತ್ತದೆ. ಸೊಳ್ಳೆ ಕಡಿತಕ್ಕೆ ಒಳಗಾಗುವುದಕ್ಕೆ ಶೇ.85ರಷ್ಟು ತಳಿಶಾಸ್ತ್ರ ಕಾರಣವಾಗಿರಬಹುದು ಎಂದು ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ.
ಹೆಚ್ಚಿನ ಚಯಾಪಚಯ ದರವನ್ನು ಹೊಂದಿರುವವರು ಮತ್ತು ಸುತ್ತಮುತ್ತಲಿನ ಜನರಿಗೆ ಹೋಲಿಸಿದರೆ ಹೆಚ್ಚು Co2 ಅನ್ನು ಹೊರಹಾಕುವವರು ಹೆಚ್ಚು ಸೊಳ್ಳೆ ಕಡಿತಕ್ಕೆ ಗುರಿಯಾಗಬಹುದು.
‘0’ ರಕ್ತ ಮತ್ತು ಬೆವರು: ಇತರ ರಕ್ತ ಪ್ರಕಾರಗಳಿಗಿಂತ ಸೊಳ್ಳೆಗಳು ‘O’ ರಕ್ತದ ಗುಂಪಿನ ಜನರಿಗೆ ಹೆಚ್ಚು ಆಕರ್ಷಿತವಾಗುತ್ತವೆ.
ನಿಮ್ಮ ದೇಹದಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ವ್ಯಾಯಾಮ ಮಾಡುವಾಗ ಹೆಚ್ಚು ದೇಹದ ಶಾಖವನ್ನು ಹೊರಹೋಗುತ್ತದೆ, ಇದು ಸೊಳ್ಳೆಗಳಿಗೆ ಮತ್ತೊಂದು ಆಕರ್ಷಣೆಯಾಗಿರುತ್ತದೆ.
ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ನಿಂತ ನೀರಿನಿಂದ ದೂರವಿರಿ.
ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ.
ಕಿಟಕಿ ಪರದೆ/ಸೊಳ್ಳೆ ಪರದೆ ಬಳಸಿ.
ಬಳಸುವ ಪರಿಮಳ ಕಡಿಮೆ ಆಕರ್ಷಕವಾಗಿರಲಿ.
ಹೆಚ್ಚು ಕಡಿತದ ಸಮಯದಲ್ಲಿ ಮನೆಯಲ್ಲೇ ಇರುವುದು ಉತ್ತಮ.