ದೊಡ್ಡಪತ್ರೆ ಜನರಿಗೆ ಪರಿಚಯವಿರುವ ಎರಡು ಅಡಿ ಎತ್ತರಕ್ಕೆ ಬೆಳೆಯುವ ಪೊದೆಯಂತಹ ಸಣ್ಣ ಗಿಡ. ಹೆಚ್ಚಿನ ತೇವಾಂಶವಿರುವ ಮರಳು ಮಿಶ್ರಿತ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯು ತ್ತದೆ. ಗಿಡದ ಕಾಂಡವನ್ನು ನೆಟ್ಟು ಬೆಳೆಸಬಹುದು. ನೆಟ್ಟ 2 ತಿಂಗಳಲ್ಲಿ ಉಪಯೋಗಿಸಲು ಯೋಗ್ಯವಾದ ಎಲೆಗಳನ್ನು ಪಡೆಯಬಹುದು. ದಪ್ಪ ಎಲೆಗಳ ಕೂಡಿದ ಸುವಾಸನೆಯನ್ನು ಬೀರುವ ಈ ಗಿಡ ಮನೆಯಂಗಳದ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ. ಎಲೆಯು ಪಿತ್ತದ ಗಂಧೆ, ಅಜೀರ್ಣ, ಕೆಮ್ಮು, ನೆಗಡಿ, ಹುಳು ಕೀಟಗಳ ಕಡಿತ ಮುಂತಾದ ಸಂದರ್ಭಗಳಲ್ಲಿ ಅತ್ಯುತ್ತಮ ಔಷಧ.
ದೊಡ್ಡಪತ್ರೆ ಉಪಯೋಗಗಳು
1. ಒಂದು ಚಮಚದಷ್ಟು ದೊಡ್ಡಪತ್ರೆ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ದಿನಕ್ಕೆ ಮೂರು ಬಾರಿ ಆಹಾರಕ್ಕೆ ಮುಂಚೆ ಸೇವಿಸುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುವುದು. 5-10 ವರ್ಷದ ಮಕ್ಕಳಿಗೆ ಇದರ ಅರ್ಧ ಭಾಗ 2-5 ವರ್ಷದ ಮಕ್ಕಳಿಗೆ ಇದರ ಕಾಲು ಭಾಗ ಸಾಕು.
2. ಒಂದು ಚಮಚ ಪತ್ರೆಯ ರಸಕ್ಕೆ ಅರ್ಧ ಚಮಚ ಜೀರಿಗೆ ಪುಡಿಯನ್ನು ಹಾಕಿ ಸೇವಿಸುವುದರಿಂದ ಪಿತ್ತದ ಗಂಧೆಗಳಲ್ಲಿ ಉತ್ತಮ ಪರಿಣಾಮ ಕಂಡು ಬರುತ್ತದೆ.
3. 4-5 ಎಲೆಗೆ ಸ್ವಲ್ಪ ಜೀರಿಗೆ ಪುಡಿ ಹಾಕಿ ಎರಡನ್ನು ಒಲೆಯ ಮೇಲಿರುವ ಕಾವಲಿಗೆ ಹಾಕಬೇಕು. ಸ್ವಲ್ಪ ಬಿಸಿಯಾದ ನಂತರ ಹೊರತೆಗೆದು ಹಿಂಡಿ ರಸ ತೆಗೆಯಬೇಕು. ಈ ರಸಕ್ಕೆ ಸ್ವಲ್ಪ ಉಪ್ಪು, ಸ್ವಲ್ಪ ಜೇನು ತುಪ್ಪ ಸೇರಿಸಿ ಊಟಕ್ಕೆ ಮುಂಚೆ ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆ ನೋವು ಕಡಿಮೆಯಾಗುತ್ತದೆ. ಮಕ್ಕಳಿಗೆ ಇದು ಹೆಚ್ಚು ಪರಿಣಾಮಕಾರಿ. ಮಕ್ಕಳಿಗೆ ಇದರ ಅರ್ಧ ಭಾಗ ಸಾಕಾಗುತ್ತದೆ.
4, ದೊಡ್ಡಪತ್ರೆ, ಜೀರಿಗೆ ಹಾಗು ಮೆಣಸು ಮೂರನ್ನು ಸೇರಿಸಿ ಹುರಿದು ನಂತರ ಅರೆಯಬೇಕು. ಅದಕ್ಕೆ ಹುಳಿಯಿಲ್ಲದ ಮಜ್ಜಿಗೆ ಅಥವಾ ಮೊಸರು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಿಸಿ ಅನ್ನದೊಡನೆ ಸೇವಿಸಿದರೆ ಹೆಚ್ಚು ರುಚಿ. ಒಳ್ಳೆಯ ಜೀರ್ಣಕಾರಿ, ಪಿತ್ತಹಾರಿ, ಚಳಿ ಮತ್ತು ಮಳೆಗಾಲದಲ್ಲಿ ಅತ್ಯುತ್ತಮ.
ಇದನ್ನು ಓದಿ: ಹಲವಾರು ರೋಗಗಳಿಗೆ ಮದ್ದಾದ ನುಗ್ಗೆಯ ಮಹತ್ವ