ಹೃದಯದ ರಕ್ಷಣೆ ಮತ್ತು ಜ್ಞಾಪಕ ಶಕ್ತಿ ಸುಧಾರಣೆಗೆ ಸೂಪರ್ ಫುಡ್:
ಬೀಟ್‌ರೂಟ್: ನಮ್ಮ ದೇಹಕ್ಕೆ ಅಗತ್ಯವಿರುವ ಹೆಚ್ಚಿನ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರುವ ಕೆಂಪು ತರಕಾರಿ ಬೀಟ್‌ರೂಟ್ ಅನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗಿದೆ. ವರ್ಷದ ಎಲ್ಲಾ ಸಮಯದಲ್ಲೂ ಲಭ್ಯವಿರುವ ಬೀಟ್‌ರೂಟ್ ಅನ್ನು ಯಾವಾಗ ಬೇಕಾದರೂ ಸೇವಿಸಬಹುದು.

ಬೀಟ್‌ರೂಟ್ ಸೇವನೆ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಧುಮೇಹದ ಅಪಾಯ ಕಡಿಮೆಯಾಗುವುದಲ್ಲದೆ ಅನೇಕ ಆರೋಗ್ಯ ಪ್ರಯೋಜನಗಳಾಗುತ್ತವೆ.
ಬೀಟ್‌ರೂಟ್ ನಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು:
ವಿಟಮಿನ್ ಸಿ
ವಿಟಮಿನ್ ಬಿ1, ಬಿ2, ಬಿ3, ಬಿ6
ನೈಟ್ರೇಟ್
ಫೋಲೇಟ್
ಸತು
ಪೊಟ್ಯಾಸಿಯಂ ಮತ್ತು ಫೋಲಿಕ್ ಆಮ್ಲ
ಕಬ್ಬಿಣ
ಅಯೋಡಿನ್
ಬೀಟ್‌ರೂಟ್ ಸೇವನೆಯ ಉತ್ತಮ ಮಾರ್ಗ
ಪೌಷ್ಠಿಕ ತಜ್ಞರ ಪ್ರಕಾರ, ಬೀಟ್‌ರೂಟ್ ಅನ್ನು ಜ್ಯೂಸ್ ರೂಪದಲ್ಲಿ ಸೇವಿಸುವುದು ಉತ್ತಮ. ಈ ಮೂಲಕ ಅದರಲ್ಲಿನ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುತ್ತವೆ. ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಕಾರ್ಬೋಹೈಡ್ರೆಟ್‌ಗಳಿಂದ ಸಮೃದ್ಧವಾಗಿರುವ ಬೀಟ್‌ರೂಟ್ ಸೇವನೆಯಿಂದ ದೈನಂದಿನ ಚಟುವಟಿಕೆಗಳಿಗೆ ನಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿ ದೊರೆಯುತ್ತದೆ.
ಹೃದಯದ ಆರೋಗ್ಯ: ಬೀಟ್‌ರೂಟ್ ಹೃದಯದ ಆರೋಗ್ಯಕ್ಕೆ ಸೂಕ್ತವಾದ ತರಕಾರಿಯಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳ ಪ್ರಮಾಣ ಹೆಚ್ಚಾಗಿದ್ದು, ಇದು ಹೃದಯರಕ್ತನಾಳದ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ, ರಕ್ತವನ್ನು ಶುದ್ದೀಕರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತನಾಳಗಳ ಕಾರ್ಯನಿರ್ವಹಣೆಯನ್ನು ಕೂಡ ಸುಧಾರಿಸುತ್ತದೆ.
ಜ್ಞಾಪಕ ಶಕ್ತಿ ಸುಧಾರಣೆ: ಸೂಪರ್ ಫುಡ್ ಆಗಿರುವ ಬೀಟ್‌ರೂಟ್ ಜ್ಞಾಪಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್‌ರೂಟ್ ರಸವು ಸೆರೆಬ್ರಲ್ ರಕ್ತದ ಹರಿವನ್ನು ಹಾಗೂ ಅರಿವಿನ ಪ್ರಕ್ರಿಯೆಗಳಿಗೆ ಕಾರಣವಾಗುವ ಮೆದುಳಿನ ಭಾಗವನ್ನು ಉತ್ತೇಜಿಸುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯ ಸುಧಾರಣೆ: ಬೀಟ್‌ರೂಟ್ ನಮ್ಮ ದೇಹದ ರಕ್ಷಣೆಯನ್ನು ಸುಧಾರಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ಕ್ರಿಯೆಗೆ ಅಗತ್ಯವಾದ ವಿಟಮಿನ್ ಎ, ವಿಟಮಿನ್ ಸಿ ಅಥವಾ ಫೋಲಿಕ್ ಆಮ್ಲದಂತಹ ಪೋಷಕಾಂಶಗಳ ಪ್ರಮಾಣ ಇದರಲ್ಲಿ ಹೆಚ್ಚಾಗಿರುತ್ತದೆ.
ಕೊಬ್ಬಿನ ಸಮಸ್ಯೆಯಿಲ್ಲ: ತೂಕವನ್ನು ಕಳೆದುಕೊಳ್ಳಲು ಬಯಸುವವರಿಗೆ ಬೀಟ್‌ರೂಟ್ ಸೇವನೆ ಮಾಡುವಂತೆ ಸೂಚಿಸಲಾಗುತ್ತದೆ. ಇದು ಆರೋಗ್ಯಕರ, ಹಗುರವಾದ ಮತ್ತು ತೃಪ್ತಿಕರ ಆಹಾರವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿ 100 ಗ್ರಾಂ ಆಹಾರದಲ್ಲಿ, ಇದು 43 kcal ಮತ್ತು 1.6 ಪ್ರೋಟೀನ್ ಗಳನ್ನು ಒದಗಿಸುತ್ತದೆ.
ಅಥ್ಲೆಟಿಕ್ ಕಾರ್ಯಕ್ಷಮತೆ ಸುಧಾರಣೆ: ಬೀಟ್‌ರೂಟ್ ಸೇವನೆಯಿಂದ ಸ್ನಾಯುಗಳಿಗೆ ಪೋಷಕಾಂಶಗಳಿಂದ ಸಮೃದ್ಧವಾದ ರಕ್ತ ಮತ್ತು ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಹೀಗಾಗಿ, ವ್ಯಾಯಾಮ ಅಥವಾ ಕಂಪ್ಯೂಟರ್ ಬಳಕೆ ವೇಳೆ ನಮ್ಮ ದೇಹದ ಕಾರ್ಯಕ್ಷಮತೆ ಮತ್ತು ಪ್ರತಿಕ್ರಿಯೆ ಸುಧಾರಿಸುತ್ತದೆ.
ಜೀರ್ಣಕ್ರಿಯೆ: ಒಂದು ಕಪ್ ಬೀಟ್‌ರೂಟ್ ದೇಹಕ್ಕೆ 3.81 ಗ್ರಾಂ ಫೈಬರ್ ಅನ್ನು ಒದಗಿಸುತ್ತದೆ. ಸಾಕಷ್ಟು ಫೈಬರ್ ಸೇವನೆಯು ಸುಗಮ ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಅತ್ಯಗತ್ಯ. ಒಂದು ಕಪ್ ಬೀಟ್‌ರೂಟ್ ಓರ್ವ ವ್ಯಕ್ತಿಗೆ ದಿನಾಲೂ ಅಗತ್ಯವಿರುವ ಫೈಬರ್ ನ ಶೇ.8.81ಕ್ಕಿಂತ ಹೆಚ್ಚಿನದನ್ನು ಒದಗಿಸುತ್ತದೆ(ಇದು ವಯಸ್ಸು ಮತ್ತು ಲಿಂಗವನ್ನು ಅವಲಂಬಿಸಿರುತ್ತದೆ).
ಅಪಾಯಕಾರಿ ಅಂಶ ಯಾವುದು?
ಇದರಲ್ಲಿ ಆಕ್ಸಲಿಕ್ ಆಮ್ಲದ ಪ್ರಮಾಣ ಹೆಚ್ಚಾಗಿರುವ ಕಾರಣದಿಂದ ಮೂತ್ರಪಿಂಡದಲ್ಲಿ ಆಕ್ಸಲೇಟ್ ಕಲ್ಲುಗಳ ಸಮಸ್ಯೆ ಇರುವವರನ್ನು ಹೊರತುಪಡಿಸಿದರೆ, ನಿಯಮಿತ ಬೀಟ್‌ರೂಟ್ ಸೇವನೆಯಿಂದ ಯಾವುದೇ ಆರೋಗ್ಯದ ಅಪಾಯ ಎದುರಾಗುವುದಿಲ್ಲ.




