ಲೋಳೆಸರ (ಅಲೋವೇರ) ಹೆಂಗೆಳೆಯರಿಗೆ ಇಷ್ಟವಾಗಿರುತ್ತದೆ ಹಾಗೂ ಅವರ ಆರೋಗ್ಯ ಸಮಸ್ಯೆಗಳಿಗೆ ಉಪಕಾರಿಯಾಗಿರುತ್ತದೆ. ಮನೆಯ ಅಂಗಳದಲ್ಲಿ ಬಹಳ ಆಸಕ್ತಿಯಿಂದ ಹೆಂಗಸರು ಬೆಳೆಸುತ್ತಾರೆ. ಇದನ್ನು ಬೇರಿನ ಸಮೇತ ಕಿತ್ತು ದಾರದಲ್ಲಿ ಕಟ್ಟಿ ಮನೆಯಲ್ಲಿ ಕಟ್ಟಲು ಸೊಳ್ಳೆಗಳು ಬರುವುದಿಲ್ಲ.
ಅಷ್ಟೇ ಅಲ್ಲದೆ ಇದರ ಮೃದುವಾದ ದಪ್ಪಗಿನ ಎಲೆಗಳಿಂದ ಬರುವ ಅಂಟುವ ಶೃಂಗಾರ ಸಾಧನಗಳಾದ ಶ್ಯಾಂಪು, ಸ್ಕಿನ್ ಕ್ರೀಮ್ ಇವುಗಳಲ್ಲಿ ಹೇರಳವಾಗಿ ಬಳಕೆಯಾಗುತ್ತದೆ. ಇದರ ಎಲೆಯು ಸ್ರವಿಸುವ ಅಂಟಾದ ರಸದಿಂದ ಕೂಡಿರುತ್ತದೆ. ಆದ್ದರಿಂದ ಇದಕ್ಕೆ ಲೋಳೆಸರ ಎಂದು ಕರೆಯುತ್ತಾರೆ,
ಇದರ ರಸವು ನೇತ್ರ ರೋಗಗಳಲ್ಲಿ ಅದರಲ್ಲೂ ನೇತಾಬಿಷ್ಕಿಂದ ಎಂಬ ರೋಗದಲ್ಲಿ ಹಾಗೂ ನೇತ್ರ ಶ್ರಮದಲ್ಲಿ ಇದನ್ನು ತಂಪಾದ ಔಷಧಿಯಾಗಿ ಉಪಯೋಗಿಸುವರು. ಆದ್ದರಿಂದ ಇದಕ್ಕೆ ನೇತ್ರ ಪೋಷಕ ಎಂದು ಕರೆದಿರುವುದು.
ಅಲ್ಲದೇ ಇದರ ರಸವು ಚರ್ಮಕ್ಷತೆ ಅಥವಾ ಗಾಯಗಳಲ್ಲಿ ಜೀವಕೋಶಗಳನ್ನು ವೃದ್ಧಿಪಡಿಸುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಹೊಟ್ಟೆಗೆ ಸೇವಿಸಲು ಯಕೃತ್ (Liver Tonic) ಬಲವೃದ್ಧಿಸಿ ಕಾಮಾಲೆ ರೋಗದಲ್ಲಿ, ಹೆಣ್ಣು ಮಕ್ಕಳ ಮಾಸಿಕ ಸ್ರಾವದಲ್ಲಿ ಬರುವ ಹೊಟ್ಟೆ ನೋವಿನಲ್ಲಿ ಹಾಗೂ ಮಲಬದ್ಧತೆಯಲ್ಲಿ ಉಪಯೋಗವಾಗುತ್ತದೆ.
ಲೋಳೆಸರ ಉಪಯೋಗಗಳು
1. ರಸ ತೆಗೆಯಲು ಸಿಪ್ಪೆ ತೆಗೆದು ಲೋಳೆಯ ಮೃದುಭಾಗವನ್ನು ಸಣ್ಣ ತುಂಡು ಮಾಡಿ ತ್ರಿಫಲೆಯ ರಸವನ್ನು ಚಿಮುಕಿಸಿ ಒಂದು ರಾತ್ರಿ ಇಟ್ಟು ಬೆಳಿಗ್ಗೆ ರಸವನ್ನು ಶುಭ್ರವಾದ ವಸ್ತ್ರದಲ್ಲಿ ಶೋಧಿಸಿ 2-3 ಬಾರಿ ಕಣ್ಣಿಗೆ ಹನಿಗಳಾಗಿ ಹಾಕಬಹುದು,
2. ಎಲೆಯ ತೊಳೆಯನ್ನು ಬೇಕಾದಷ್ಟು ಪ್ರಮಾಣದಲ್ಲಿ ತುಂಡು ಮಾಡಿ, ಅರಿಶಿನ ಸಿಂಪಡಿಸಿ, ಕಾಲಿನ ಆಣಿಯಲ್ಲಿ ರಾತ್ರಿ ಕಟ್ಟಬೇಕು. ಇದರಿಂದ ನೋವು ಶಮನವಾಗಿ ಆಣಿ ಮೃದುವಾಗಿ ಹೊರಬೀಳುತ್ತದೆ.
3. ತೊಳೆಯನ್ನು ತುಂಡು ಮಾಡಿ ಕಣ್ಣಿನ ರೆಪ್ಪೆಯ ಮೇಲೆ ಇಟ್ಟರೆ ತಂಪಾಗಿ ದೃಷ್ಟಿಯ ಒತ್ತಡ, ಉರಿ, ನೋವು ತಡೆಯುತ್ತದೆ.
4. ಇದರ ರಸವನ್ನು ಹಾಗೆಯೇ ಸ್ರವಿಸಲು ಬಿಟ್ಟರೆ ಒಣಗಿ ಗಟ್ಟಿಯಾಗಿ ಮೂಸಾಂಬರವೆನಿಸುತ್ತದೆ. ಇದನ್ನು ಋತುಸ್ರಾವದ ತೊಂದರೆಯಲ್ಲಿ ಉಪಯೋಗಿಸಬಹುದು.
ಇದನ್ನು ಓದಿ: ಔಷಧಿಗಳ ಸಂಜೀವಿನಿ ತುಳಸಿ ಗಿಡದ ಮಹತ್ವ